ಯುಎಇ ನ್ಯಾಶನಲ್ಸ್ ಕಪ್ ಎತ್ತಿದ ಅಬ್ದುಲ್ಲಾ ಕಲ್ಬತ್

Update: 2019-04-07 17:11 GMT

ದುಬೈ, ಎ. 7: ಇಲ್ಲಿನ ಅಡ್ರೆಸ್ ಮೊಂಟ್‌ಗೊಮೆರಿಯಲ್ಲಿ ಶನಿವಾರ ನಡೆದ 25ನೇ ದುಬೈ ಡ್ಯೂಟಿ ಫ್ರೀ ಯುಎಇ ನ್ಯಾಶನಲ್ಸ್ ಕಪ್  ಗಾಲ್ಫ್  ಕ್ರೀಡಾವಳಿಯಲ್ಲಿ ಹನ್ನೊಂದರ ಹರೆಯದ ಅಬ್ದುಲ್ಲಾ ಕಲ್ಬತ್ 49 ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಎರಡನೇ  ವರ್ಷವೂ  ತನ್ನದಾಗಿಸಿದ್ದಾರೆ. 

ಪಂದ್ಯಾವಳಿಯಲ್ಲಿ 50 ಆಟಗಾರರು ಭಾಗವಹಿಸಿದ್ದು ವೈಯಕ್ತಿಕ ಮತ್ತು ಒಟ್ಟಾರೆ ಸ್ಟೇಬಲ್‌ಫೋರ್ಡ್ ವಿಭಾಗದಲ್ಲಿ ಪಂದ್ಯಗಳು ನಡೆದವು. 

ಒಟ್ಟಾರೆ ಸ್ಟೇಬಲ್‌ಫೋರ್ಡ್, ಕಿರಿಯ ಮತ್ತು ಮಹಿಳಾ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಖಾಲಿದ್ಯೂಸುಫ್ ಒಟ್ಟಾರೆ ಸ್ಟೇಬಲ್‌ಫೋರ್ಡ್ ವಿಭಾಗದಲ್ಲಿ 75 ಅಂಕಗಳೊಂದಿಗೆ ವಿಜೇತರಾಗಿ ಹೊರಹೊಮ್ಮಿದರು. ಆದರೆ 12ರ ಹರೆಯದ ರಶೀದ್ ಅಲ್ ಜಸ್ಮಿ 40 ಅಂಕಗಳೊಂದಿಗೆ 3ನೇ ಸ್ಥಾನ, 12ರ ಹರೆಯದ ಅಬ್ದಲ್ಲಾ ಅಲ್ ಸುವೈದಿ 44 ಅಂಕಗಳೊಂದಿಗೆ  2ನೇ ಸ್ಥಾನ ಪಡೆದು  ಒಟ್ಟಾರೆ ಮೂರು  ಸ್ಥಾನಗಳನ್ನು ಜಯಿಸುವುದರೊಂದಿಗೆ  ಪ್ರಾಬಲ್ಯ ಮೆರೆದರು. 

ಮಹಿಳೆಯರ ವಿಭಾಗದಲ್ಲಿ ಇಬ್ಬರು ಮಹಿಳಾ ಗಾಲ್ಫರ್‌ ಗಳು ಭಾಗವಹಿಸಿದ್ದರು. ಇವರ ಪೈಕಿ ರೀಮಾ ಅಲ್ ಹಿಲೂ 33 ಅಂಕಗಳೊಂದಿಗೆ  ಗೆಲುವು ತನ್ನದಾಗಿಸಿದರು. ಕಿರಿಯರ ವಿಭಾಗದಲ್ಲಿ ಎಂಟು ಆಟಗಾರರಿದ್ದು ಮುಹಮ್ಮದ್ ಸ್ಕೈಕ್ 45 ಅಂಕಗಳೊಂದಿಗೆ  ಪದಕ  ತನ್ನದಾಗಿಸಿದರು. 

ಕುಳಿಯ ಸಮೀಪದ ಹೊಡೆತಕ್ಕೆ ಪುರುಷರ ವಿಭಾಗದಲ್ಲಿ ಅಬ್ದುಲ್ಲ ಅಲ್ ನೂನ್ ಗೆದ್ದರೆ, ಪುರುಷರ ದೀರ್ಘ ಹೊಡೆತ ವಿಭಾಗದಲ್ಲಿ ಸೈಫ್ ತಬೆತ್  ಗೆಲುವು ಸಾಧಿಸಿದರು. ಮಹಿಳೆಯರ ವಿಭಾಗದಲ್ಲಿ ದೀರ್ಘ ಹೊಡೆತ ಮತ್ತು ಕುಳಿಯ ಸಮೀಪದ  ಹೊಡೆತ ಎರಡೂ  ವಿಭಾಗದಲ್ಲಿ ರಬಾಬ್  ಅಲ್ ಹಜ್  ಗೆಲುವಿನ ನಗೆ ಬೀರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News