ಬಿ.ಆರ್.ಶೆಟ್ಟಿ ನೇತೃತ್ವದ 'ಎನ್ಆರ್‍ಐ ಗ್ಲೋಬಲ್‌ ಸಮ್ಮಿಟ್’ ವಿಫಲ: ಉದ್ಯಮಿಗಳೂ ಇಲ್ಲ, ಸಭಿಕರೂ ಇಲ್ಲ

Update: 2019-04-07 17:56 GMT

ದುಬೈ, ಎ.4: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯವರ ನೇತೃತ್ವದಲ್ಲಿ ದುಬೈಯಲ್ಲಿ ನಡೆದ 'ಎನ್ ಆರ್ ಐ ಗ್ಲೋಬಲ್‌ ಬ್ಯುಸಿನೆಸ್ ಸಮ್ಮಿಟ್' ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಲಯಾಳಂ ಸುದ್ದಿ ವಾಹಿನಿ ‘ಜೈ ಹಿಂದ್’ ವರದಿ ಮಾಡಿದೆ.

ಬಿ.ಆರ್. ಶೆಟ್ಟಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಎನ್ ಆರ್ ಐಗಳು ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ 'ಹಮ್ ಭಿ ಚೌಕಿದಾರ್' ಎಂದು ಬರೆಯಲಾಗಿತ್ತು. ಈ ವಿಚಾರ ಭಾರೀ ವಿವಾದ ಸೃಷ್ಟಿಸಿದ ನಂತರ ಕಾರ್ಯಕ್ರಮದ ಸಂಘಟಕರು ‘ಇದು ಪಕ್ಷೇತರ ಕಾರ್ಯಕ್ರಮ’ ಎಂದು ಸಮಜಾಯಿಷಿ ನೀಡಿದ್ದರು. ನಂತರ ಈ ಕಾರ್ಯಕ್ರಮದ ಹೆಸರನ್ನು ‘ನಯಾ ಭಾರತ್’ ಎಂದು ಬದಲಿಸಲಾಯಿತು.

ಸಂಘಟಕರು ಏನೇ ಹೇಳಿದ್ದರೂ ಮೋದಿ ಆಪ್ತ ಸ್ವಾಮಿ ಪರಮಾತ್ಮಾನಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಇದು ಬಿಜೆಪಿ ಪರ ಕಾರ್ಯಕ್ರಮ ಎನ್ನುವ ಅನುಮಾನವಿತ್ತು. ಈ ಅನುಮಾನವನ್ನು ನಿಜವಾಗಿಸುವ ರೀತಿಯಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಮೋದಿ ಪರ ಜೈಕಾರ ಹಾಕಲಾಯಿತು.

ಆದರೆ ಈ ಜೈಕಾರ ಮತ್ತು ‘ಹಮ್ ಭೀ ಚೌಕಿದಾರ್’ ಎನ್ನುವ ಟ್ಯಾಗ್ ಲೈನ್ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸೆಳೆಯುವಲ್ಲಿ ವಿಫಲವಾಯಿತು. ಯುಎಇಯಲ್ಲಿರುವ ಯಾವೊಬ್ಬ ಪ್ರಮುಖ ಅನಿವಾಸಿ ಉದ್ಯಮಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ವೇದಿಕೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೂ, ಮುಖ್ಯ ಅತಿಥಿಗಳು ಮಾತನಾಡುತ್ತಿದ್ದಾಗಲೂ ಬೆರಳೆಣಿಕೆ ಸಭಿಕರು ಮಾತ್ರ ಹಾಜರಿದ್ದು, ನೂರಾರು ಕುರ್ಚಿಗಳು ಖಾಲಿ ಇದ್ದವು ಎಂದು ‘ಜೈ ಹಿಂದ್’ ವರದಿ ತಿಳಿಸಿದೆ.

ಒಂದೆಡೆ ಕಾರ್ಯಕ್ರಮ ವಿಫಲವಾಗಿದ್ದರೂ, ಇಂತಹ ರಾಜಕೀಯ ಕಾರ್ಯಕ್ರಮಗಳನ್ನು ಸಾವಿರಾರು ಭಾರತೀಯರಿಗೆ ಜಾತಿ, ಧರ್ಮ, ರಾಜಕೀಯ ಹಿನ್ನೆಲೆಗಳನ್ನು ನೋಡದೆ ಉದ್ಯೋಗ ನೀಡಿರುವ ದುಬೈಯಲ್ಲಿ ನಡೆಸುವುದು ಎಷ್ಟು ಸರಿ, ಉದ್ಯಮಿಗಳ ಸಮ್ಮಿಟ್ ಹೆಸರಿನಲ್ಲಿ ಒಂದು ರಾಜಕೀಯ ಪಕ್ಷದ ಪರ ಪ್ರಚಾರ ನಡೆಸುವುದು ಎಷ್ಟು ಸರಿ ಎಂದು ದುಬೈಯಲ್ಲಿರುವ ಭಾರತೀಯರು ಪ್ರಶ್ನಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಸೌಹಾರ್ದದ ವಾತಾವರಣವಿರುವ ದುಬೈಯಲ್ಲಿ ರಾಜಕೀಯ ಕಾರ್ಯಕ್ರಮ ನಡೆಸಿ ಆಮೂಲಕ ಮನಸ್ಸುಗಳನ್ನು ಕಲುಷಿತಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News