ತುಂಬೆ ಅತ್ಯಾಧುನಿಕ ಮೆಡಿಸಿಟಿ ಸಂಕೀರ್ಣಕ್ಕೆ ಮಲೇಶ್ಯಾದ ಶಿಕ್ಷಣ ಸಚಿವ ನೇತೃತ್ವದ ಉನ್ನತ ಮಟ್ಟದ ನಿಯೋಗ ಭೇಟಿ

Update: 2019-04-12 08:51 GMT

ದುಬೈ: ಮಲೇಶ್ಯಾದ ಶಿಕ್ಷಣ ಸಚಿವ ಎಚ್.ಇ. ವೈಬಿ ಡಾ. ಮಝ್ಲಿ ಬಿನ್ ಮಲಿಕ್ ನೇತೃತ್ವದ ಮಲೇಶ್ಯಾದ ಉನ್ನತ ಮಟ್ಟದ ನಿಯೋಗ ತುಂಬೆಯ ಅತ್ಯಾಧುನಿಕ ಮೆಡಿಸಿಟಿ ಸಂಕೀರ್ಣಕ್ಕೆ ಬುಧವಾರ ಭೇಟಿ ನೀಡಿತು.

ನಿಯೋಗ ಅಜ್ಮಾನ್‌ನ ಯುವರಾಜ ಹಾಗೂ ಅಜ್ಮಾನ್ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶೇಕ್ ಅಮ್ಮರ್ ಬಿನ್ ಹುಮೈದ್ ಎಲ್ ನೂಎಯ್ಮಿ ಅವರನ್ನು ಕೂಡ ಭೇಟಿಯಾಗಿದೆ.

ನಿಯೋಗವನ್ನು ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್ ಮೆಡಿಸಿಟಿಯಲ್ಲಿ ಬರ ಮಾಡಿಕೊಂಡರು. ಈ ಸಂದರ್ಭ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಹೊಸ್ಸಾಮ್ ಹಂಮ್‌ದಿ, ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ತುಂಬೆ ನಿರ್ಮಾಣ ಹಾಗೂ ನವೀಕರಣ ವಿಭಾಗದ ಕಾರ್ಯಾಚರಣೆ ನಿರ್ದೇಶಕ ಹಾಗೂ ತುಂಬೆ ಟೆಕ್ನಾಲಜಿಯ ನಿರ್ದೇಶಕ ಅಕ್ರಮ್ ಮೊಯ್ದಿನ್ ಮೊದಲಾದವರು ಉಪಸ್ಥಿತರಿದ್ದರು.

ತುಂಬೆ ಮೆಡಿಸಿಟಿಯ ವ್ಯೂಹಾತ್ಮಕ ನಿರ್ದೇಶನಗಳು ಹಾಗೂ ದೃಷ್ಟಿಕೋನವನ್ನು ನಿಯೋಗಕ್ಕೆ ವಿವರಿಸಲಾಯಿತು. ನಂತರ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ, ತುಂಬೆ ಫಿಸಿಕಲ್ ಥೆರಪಿ ಹಾಗೂ ಪುನರ್ವಸತಿ ಆಸ್ಪತ್ರೆ, ತುಂಬೆ ಡೆಂಟಲ್ ಆಸ್ಪತ್ರೆ ಹಾಗೂ ತುಂಬೆ ಯೂನಿವರ್ಸಿಟಿ ಆಸ್ಪತ್ರೆ ಸೇರಿದಂತೆ ತುಂಬೆ ಮೆಡಿಸಿಟಿಯ ಆರೋಗ್ಯ ಸೇವೆ ಹಾಗೂ ಸಂಶೋಧನೆ, ವೈದ್ಯಕೀಯ ಶಿಕ್ಷಣದ ಮೊದಲಾದ ಅತ್ಯಾಧುನಿಕ ಸೌಲಭ್ಯಗಳಿಗೆ ಭೇಟಿ ನೀಡಿ ಪರಿಚಯಿಸಲಾಯಿತು.

ಈ ಸಂದರ್ಭ ಎಚ್.ಇ. ವೈಬಿ ಡಾ. ಮಝ್ಲೀ ಬಿನ್ ಮಲಿಕ್ ಮಾತನಾಡಿ, ‘‘ತುಂಬೆ ಮೆಡಿಸಿಟಿಯಲ್ಲಿ ನಾವು ಇಂದು ನೋಡಿದ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನೆ ಸೌಲಭ್ಯಗಳಿಂದ ಪ್ರಭಾವಿತರಾಗಿದ್ದೇವೆ. ತುಂಬೆ ಸಮೂಹ ಈ ವಲಯದಲ್ಲಿ ನಿಜವಾಗಿ ಚರಿತ್ರೆ ನಿರ್ಮಿಸುತ್ತಿದೆ. ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಸಹಯೋಗ ಮಾಡಿಕೊಳ್ಳಲು ನಾವು ಆಶಕ್ತಿ ಹೊಂದಿದ್ದೇವೆ. ಮಲೇಶ್ಯಾದಲ್ಲಿ ಕೂಡ ಇದೇ ರೀತಿಯ ಸೌಲಭ್ಯಗಳನ್ನು ಆರಂಭಿಸಲು ನಾವು ಬಯಸುತ್ತಿದ್ದೇವೆ.’’ ಎಂದರು.

ತುಂಬೆ ಮೊಯ್ದಿನ್ ಮಾತನಾಡಿ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಲೇಶ್ಯಾದೊಂದಿಗೆ ಸಹಯೋಗ ಮಾಡಿಕೊಳ್ಳಲು ತುಂಬೆ ಸಮೂಹ ಉತ್ಸಾಹ ಹೊಂದಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನೂತನ ವಿಶ್ವವಿದ್ಯಾನಿಲಯ ಆರಂಭಿಸುವುದೇ ಅಲ್ಲದೆ, ಆರೋಗ್ಯ ಸೇವೆ ಹಾಗೂ ಸಂಶೋಧನ ಸೌಲಭ್ಯಗಳನ್ನು ಆರಂಭಿಸುವ ಮೂಲಕ ನಮ್ಮ ಜಾಗತಿಕ ಹೆಜ್ಜೆ ಗುರುತುಗಳನ್ನು ಮೂಡಿಸುವ ಉದ್ದೇಶವನ್ನು ತುಂಬೆ ಸಮೂಹದ ವ್ಯೂಹಾತ್ಮಕ ಯೋಜನೆ ಹೊಂದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News