ಸೌದಿ ಅರೇಬಿಯಾ: ಸ್ನೇಹಿತನನ್ನು ಕೊಂದ ಇಬ್ಬರು ಭಾರತೀಯರ ಶಿರಚ್ಛೇದನ

Update: 2019-04-17 11:14 GMT

ಚಂಡೀಗಢ, ಎ.17: ಸೌದಿ ಅರೇಬಿಯಾದಲ್ಲಿ ಸಹ ಭಾರತೀಯನನ್ನು ಕೊಲೆಗೈದ ತಪ್ಪಿಗೆ ಹೊಶಿಯಾರಪುರ್ ನ ಸತ್ವಿಂದರ್ ಕೌರ್ ಹಾಗೂ ಲುಧಿಯಾನಾದ ಹರ್ಜೀತ್ ಸಿಂಗ್ ಎಂಬವರ ಶಿರಚ್ಛೇದನಗೈಯಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿದೆ. ಅವರಿಬ್ಬರ ಶಿರಚ್ಛೇದನ ಫೆಬ್ರವರಿ 28ರಂದು ನಡೆಸಲಾಗಿತ್ತು.

ಆದರೆ ಇಬ್ಬರಿಗೂ ಈ ಶಿಕ್ಷೆ ವಿಧಿಸುವ ಮೊದಲು ರಿಯಾದ್ ನಲ್ಲಿರುವ ಭಾರತೀಯ ದೂತಾವಾಸಕ್ಕೆ ಸೌದಿ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. ಅವರಿಬ್ಬರ ಮೃತದೇಹಗಳನ್ನೂ ಅವರ ಕುಟುಂಬಕ್ಕೆ ಸೌದಿ ನಿಯಮಗಳಂತೆ ಹಸ್ತಾಂತರಿಸುವ ಕ್ರಮವಿಲ್ಲ.

ಸತ್ವಿಂದರ್ ಹಾಗೂ ಹರ್ಜೀತ್ ಇಬ್ಬರೂ ಆರಿಫ್ ಇಮಾಮುದ್ದೀನ್ ಎಂಬಾತನ ಜತೆ ತಾವು ಲೂಟಿಗೈದ ಹಣದ ವಿಚಾರದಲ್ಲಿ ಜಗಳವಾಡಿ ನಂತರ ಆತನನ್ನು ಕೊಂದಿದ್ದರು. ಘಟನೆ ನಡೆದು ಕೆಲ ದಿನಗಳ ನಂತರ ಇಬ್ಬರನ್ನೂ ಮದ್ಯ ಸೇವಿಸಿ ಜಗಳವಾಡುತ್ತಿದ್ದುದಕ್ಕೆ ಬಂಧಿಸಲಾಗಿತ್ತು. ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗಳು ಪೂರ್ಣಗೊಳಿಸುವಷ್ಟರಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಇಬ್ಬರನ್ನೂ ರಿಯಾದ್ ಕಾರಾಗೃಹದಲ್ಲಿರಿಸಲಾಗಿತ್ತು.

ಅವರಿಬ್ಬರಿಗೆ ವಿಧಿಸಲಾಗಿದ್ದ ಶಿಕ್ಷೆಯ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಸೋಮವಾರ ಬಂದ ಪತ್ರದ ಮುಖೇನ ಸತ್ವಿಂದರ್ ಪತ್ನಿ ಸೀಮಾ ರಾಣಿಗೆ  ತಿಳಿದು ಬಂದಿತ್ತು.  ಆಕೆಯ ಮನವಿಗೆ ಉತ್ತರವಾಗಿ ಈ ಪತ್ರ ಬಂದಿತ್ತು. ಅವರಿಬ್ಬರನ್ನು ಕೊಲೆ ಪ್ರಕರಣದಲ್ಲಿ ಡಿಸೆಂಬರ್ 9, 2015ರಂದು ಬಂಧಿಸಲಾಗಿತ್ತು ಎಂದು ಈ ಪತ್ರದಲ್ಲಿ ತಿಳಿಸಲಾಗಿತ್ತು.

ಪ್ರಕರಣದ ವಿಚಾರಣೆ ಮೇ 31, 2017ರಂದು ನಡೆದಾಗ ಭಾರತೀಯ ದೂತಾವಾಸದ ಅಧಿಕಾರಿಯೊಬ್ಬರು ಹಾಜರಿದ್ದರು.  ಪ್ರಕರಣ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಾಗ ಅವರಿಬ್ಬರೂ ಹೆದ್ದಾರಿ ದರೋಡೆ ಪ್ರಕರಣದಲ್ಲೂ ಸಿಲುಕಿದ್ದರು.

ಭಾರತೀಯ ದೂತಾವಾಸದ ಅಧಿಕಾರಿಗಳು ಆಗಾಗ ಕಾರಾಗೃಹಕ್ಕೆ ಹೋಗಿ ವಿಚಾರಣೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದರೂ ಇಬ್ಬರ ಶಿರಚ್ಛೇದನವನ್ನೂ ಈ ವರ್ಷದ ಫೆಬ್ರವರಿ 28ರಂದು ದೂತಾವಾಸಕ್ಕೆ ಮಾಹಿತಿ ನೀಡದೆ ನಡೆಸಲಾಗಿತ್ತು ಎನ್ನಲಾಗಿದೆ. ಮೃತದೇಹಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಯಿತಾದರೂ  ಅದು ಅಲ್ಲಿನ ನಿಯಮಗಳಂತೆ ಸಾಧ್ಯವಾಗಿಲ್ಲ, ಎಂದು ಕಾನ್ಸುಲಾರ್ ನಿರ್ದೇಶಕ ಪ್ರಕಾಶ್ ಚಂದ್ ಅವರ ಸಹಿಯಿರುವ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News