ಯುಇಎಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ

Update: 2019-04-20 15:51 GMT

ಅಬುಧಾಬಿ, ಎ. 20: ಅಬುಧಾಬಿಯಲ್ಲಿನ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.

ದೇವಸ್ಥಾನವನ್ನು ನಿರ್ಮಿಸುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮಿಕ ನಾಯಕ ಮಹಂತ ಸ್ವಾಮಿ ಮಹಾರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈಶ್ವರಚರಣ ಸ್ವಾಮಿಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಈ ವಿಧಿವಿಧಾನಗಳ ಬಳಿಕ, ಪುರೋಹಿತರು ಮತ್ತು ಬಿಎಪಿಎಸ್ ಹಿಂದೂ ಮಂದಿರ ಸಮಿತಿಯ ಮುಖ್ಯಸ್ಥ ಹಾಗೂ ಸಮುದಾಯ ನಾಯಕ ಬಿ.ಆರ್. ಶೆಟ್ಟಿ ಅಡಿಗಲ್ಲು ಹಾಕಿದರು. ಭಾರತದಿಂದ ಬಂದ ಸುಮಾರು 50 ಪುರೋಹಿತರು ಕಾರ್ಯಕ್ರಮ ನಡೆಸಿಕೊಟ್ಟರು.

ದೇವಸ್ಥಾನವನ್ನು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ದೇವಸ್ಥಾನಕ್ಕೆ ಬೇಕಾಗುವ ಎಲ್ಲ ಕಲ್ಲುಗಳು ಮತ್ತು ಶಿಲೆಗಳನ್ನು ರಾಜಸ್ಥಾನದಿಂದ ತರಲಾಗುತ್ತಿದೆ. ಕಲ್ಲುಗಳನ್ನು ಭಾರತ ಶಿಲ್ಪಿಗಳು ಕೈಯಿಂದ ಕೆತ್ತಲಿದ್ದಾರೆ. ಬಳಿಕ ಅವುಗಳನ್ನು ಅಬುಧಾಬಿಗೆ ಸಾಗಿಸಲಾಗುತ್ತದೆ.

ದೇವಸ್ಥಾನ ಪೂರ್ಣಗೊಂಡಾಗ ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಹಿಂದೂ ಶಿಲಾ ದೇವಾಲಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News