ಸೌದಿ: ಬಲವಂತದ ತಪ್ಪೊಪ್ಪಿಗೆ ಆಧಾರದಲ್ಲಿ ಮರಣ ದಂಡನೆ: ಸಿಎನ್‌ಎನ್ ವರದಿ

Update: 2019-04-26 16:52 GMT

ಲಂಡನ್, ಎ. 25: 37 ಜನರ ಮರಣ ದಂಡನೆಯನ್ನು ಜಾರಿಗೊಳಿಸಿರುವುದಾಗಿ ಈ ವಾರದ ಆರಂಭದಲ್ಲಿ ಸೌದಿ ಅರೇಬಿಯವು ಘೋಷಿಸಿದೆ. ಇದು ಸೌದಿಯ ಇತಿಹಾಸದಲ್ಲೇ ಒಂದು ಬಾರಿ ಮರಣ ದಂಡನೆಗೊಳಗಾದ ಜನರ ಅತ್ಯಧಿಕ ಸಂಖ್ಯೆಯಾಗಿದೆ.

ಆದರೆ ಸೌದಿ ಅರೇಬಿಯ ನೀಡಿರುವ ಘೋಷಣೆಗಿಂತ ತುಂಬಾ ಮೊದಲು, ನಾವು ಅಮಾಯಕರು ಎಂಬುದಾಗಿ ಮರಣ ದಂಡನೆಗೊಳಗಾದ ಕೆಲವರು ಹೇಳಿದ್ದರು ಎಂಬುದಾಗಿ ಮಾಧ್ಯಮ ವರದಿಯೊಂದು ಶುಕ್ರವಾರ ಹೇಳಿದೆ.

ನಮಗೆ ಹಿಂಸೆ ನೀಡಿದವರೇ ನಮ್ಮ ತಪ್ಪೊಪ್ಪಿಗೆ ಹೇಳಿಕೆಗಳನ್ನು ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಈ ವ್ಯಕ್ತಿಗಳು ನ್ಯಾಯಾಲಯಕ್ಕೆ ಪ್ರಬಲ ಮನವಿಗಳನ್ನು ಮಾಡಿದ್ದರು ಹಾಗೂ ತನಿಖಾಧಿಕಾರಿಗಳ ಕೈಯಲ್ಲಿ ತಾವು ಅನುಭವಿಸಿದ ಚಿತ್ರಹಿಂಸೆಗೆ ತಮ್ಮಲ್ಲಿ ಪುರಾವೆ ಇದೆ ಎಂಬುದಾಗಿ ಅವರು ಹೇಳಿಕೊಂಡಿದ್ದರು ಎಂದು ಅಮೆರಿಕದ ಸುದ್ದಿವಾಹಿನಿ ಸಿಎನ್‌ಎನ್ ವರದಿ ಮಾಡಿದೆ.

ಆದರೆ, 2016ರಲ್ಲಿ ವಿಚಾರಣೆ ಮಾಡಿದ ನ್ಯಾಯಾಧೀಶರನ್ನು ಈ ಯಾವುದೇ ಮನವಿಗಳು ತಟ್ಟಲಿಲ್ಲ. ಅಂತಿಮವಾಗಿ ನ್ಯಾಯಾಧೀಶರು ಈ ಶಂಕಿತರನ್ನು ಭಯೋತ್ಪಾದಕರು ಎಂದು ಘೋಷಿಸಿದರು ಹಾಗೂ ಮರಣ ದಂಡನೆ ವಿಧಿಸಿದರು.

ಈ ಪೈಕಿ 11 ಮಂದಿಯ ವಿರುದ್ಧ ಇರಾನ್ ಪರವಾಗಿ ಗೂಢಚಾರಿಕೆ ನಡೆಸಿದ ಆರೋಪಗಳನ್ನು ಹೊರಿಸಲಾಗಿತ್ತು ಹಾಗೂ 14 ಮಂದಿಯ ವಿರುದ್ಧ 2011ರಲ್ಲಿ ನಡೆದ ಸರಕಾರ ವಿರೋಧಿ ಪ್ರತಿಭಟನೆಗಳ ವೇಳೆ ಶಿಯಾ ಪ್ರಾಬಲ್ಯದ ನಗರ ಅವಾಮಿಯದಲ್ಲಿ ಭಯೋತ್ಪಾದಕ ಗುಂಪುಗಳನ್ನು ಕಟ್ಟಿದ ಆರೋಪಗಳನ್ನು ಹೇರಲಾಗಿತ್ತು. ಅವರ ಪೈಕಿ ಹೆಚ್ಚಿನವರು ಸೌದಿ ಅರೇಬಿಯದ ಅಲ್ಪಸಂಖ್ಯಾತ ಶಿಯಾ ಸಮುದಾಯದ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News