ಅಂತರ್‌ಧರ್ಮೀಯ ದಂಪತಿಯ ಜನಿಸಿದ ಮಗುವಿಗೆ ಜನನಪ್ರಮಾಣ ಪತ್ರ ನೀಡಿದ ದುಬೈ

Update: 2019-04-28 17:10 GMT

ದುಬೈ,ಎ.28: ಸಹಿಷ್ಣುತೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅನಿವಾಸಿಗಳಿಗಾಗಿರುವ ವಿವಾಹದ ಕಾನೂನುಗಳನ್ನು ಬದಿಗೊತ್ತಿದ ಯುಎಇ ಸರಕಾರವು, ಭಾರತೀಯ ಮೂಲದ ಹಿಂದೂ ತಂದೆ ಹಾಗೂ ಮುಸ್ಲಿಂ ತಾಯಿಗೆ ಜನಿಸಿದ 9 ತಿಂಗಳ ಹೆಣ್ಣು ಮಗುವಿಗೆ ಜನನ ಪ್ರಮಾಣ ಪತ್ರವನ್ನು ನೀಡಿದೆಯೆಂದು ಮಾಧ್ಯಮವರದಿಯೊಂದು ತಿಳಿಸಿದೆ.

ಯುಎಇನಲ್ಲಿ ಜಾರಿಯಲ್ಲಿರುವ ಅನಿವಾಸಿಗಳಿಗಾಗಿನ ವಿವಾಹ ಕಾನೂನುಗಳ ಪ್ರಕಾರ ಮುಸ್ಲಿಂ ಪುರುಷನೊಬ್ಬ ಮುಸ್ಲಿಮೇತರ ಮಹಿಳೆಯನ್ನು ವಿವಾಹವಾಗಬಹುದಾಗಿದೆ. ಆದರೆ ಮುಸ್ಲಿಂ ಮಹಿಳೆಯು ಮುಸ್ಲಿಮೇತರನನ್ನು ವಿವಾಹವಾಗುವಂತಿಲ್ಲ. ಶಾರ್ಜಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಕಿರಣ್ ಬಾಬು ಹಾಗೂ ಸಾಬೂ ಸಿದ್ದೀಕ್ 2016ರಲ್ಲಿ ಕೇರಳದಲ್ಲಿ ವಿವಾಹವಾಗಿದ್ದರು. 2018ರ ಜುಲೈನಲ್ಲಿ ಈ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ ತಂದೆ ಹಿಂದೂವಾಗಿದ್ದರಿಂದ ಯುಎಇ ಕಾನೂನು ಪ್ರಕಾರ ಮಗುವಿಗೆ ಜನನ ಪ್ರಮಾಣ ಪತ್ರ ನೀಡಲು ಆಸ್ಪತ್ರೆ ನಿರಾಕರಿಸಿತ್ತು.

ಬಾಬು ಅವರು ನ್ಯಾಯಾಲಯದ ಮೆಟ್ಟಲೇರಿ ಜನನ ಪ್ರಮಾಣ ಪತ್ರವನ್ನು ಪಡೆಯುವುದಕ್ಕಾಗಿ ನಿರಾಕ್ಷೇಪಣ ಪತ್ರ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು.

ತನ್ನ ಪುತ್ರಿಯ ಜನನಕ್ಕೆ ಸಂಬಂಧಿಸಿ ಯಾವುದೇ ಕಾನೂನು ದಾಖಲೆಗಳಿಲ್ಲದಿ ರುವುದರಿಂದ, ಬಾಬು ಅವರು ಯುಎಇ ವಿದೇಶಿಯರಿಗೆ ನೀಡುವ ಕ್ಷಮಾದಾನದ (ಆ್ಯಮ್ನೆಸ್ಟಿ ಪೀರಿಯಡ್) ಕಾನೂನಿನ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯು ಈ ಕಾನೂನನ್ನು ಬಾಬು ಅವರು ಬಳಸಿಕೊಳ್ಳುವುದಕ್ಕೆ ನೆರವಾಯಿತು. ಆದರೆ ಆಕೆಯ ಜನನವನ್ನು ಸಾಬೀತುಪಡಿಸಲು ಯಾವುದೇ ಜನನ ನೋಂದಣಿ ಸಂಖ್ಯೆ ಅಥವಾ ದತ್ತಾಂಶಗಳು ಇರಲಿಲ್ಲ’’ ಎಂದು ಅವರು ಹೇಳಿದರು.

‘‘ ಆದರೆ ಯುಎಇನ ನ್ಯಾಯಾಂಗ ಇಲಾಖೆಯು ತನ್ನ ಪ್ರಕರಣವನ್ನು ವಿಶಿಷ್ಟವೆಂದು ಪರಿಗಣಿಸಿತು. ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಜನನ ಪ್ರಮಾಣಕ್ಕಾಗಿ ಮನವಿಪತ್ರ ಸಲ್ಲಿಸಬೇಕು. ಅದಕ್ಕೆ ಮುಖ್ಯ ನ್ಯಾಯಮೂರ್ತಿಯವರ ಅನುಮತಿ ದೊರೆಯಬೇಕು. ಆನಂತರ ಅದನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿ ಜನನಪ್ರಮಾಣ ಪತ್ರ ಪಡೆಯ ಬಹುದಾಗಿದೆ ಎಂದು ನನಗೆ ಅಧಿಕಾರಿಗಳು ತಿಳಿಸಿದರು’’ ಎಂದು ಬಾಬು ತಿಳಿಸಿದ್ದಾರೆ.

ಅವರ ಸೂಚನೆಯ ಪ್ರಕಾರವೇ, ಬಾಬು ಮತ್ತೆ ನ್ಯಾಯಾಲಯದ ಮೆಟ್ಟಲೇರಿದರು. ಆದರೆ ಈ ಬಾರಿ ಅವರ ಪ್ರಕರಣಕ್ಕೆ ನ್ಯಾಯಾಲಯದ ಅನುಮೋದನೆ ದೊರೆಯಿತು. ಎಪ್ರಿಲ್ 14ರಂದು ದಂಪತಿಯ ಪುತ್ರಿ ಅನಂತ ಅಸ್ಲೀನ್ ಕಿರಣ್ ಎಂಬ ಹೆಸರಿನಲ್ಲಿ ಜನನ ಪ್ರಮಾಣ ಪತ್ರ ನೀಡಲಾಯಿತು.

ಯುಎಇನ ಇತಿಹಾಸದಲ್ಲೇ ಅಂತರ್‌ಧರ್ಮೀಯ ದಂಪತಿಯ ಮಗುವಿಗಾಗಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿದ ಪ್ರಥಮ ಪ್ರಕರಣ ಇದಾಗಿದೆಯೆಂದು ತನಗೆ ಅಧಿಕಾರಿಗಳು ತಿಳಿಸಿರುವುದಾಗಿ ಕಿರಣ್ ಬಾಬು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News