ಅಜ್ಮಾನ್‌: ಅಪರೂಪದ ಕಣ್ಣಿನ ಕಾಯಿಲೆ ಪೀಡಿತ ನವಜಾತ ಶಿಶುವಿಗೆ ತುಂಬೆ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

Update: 2019-04-29 17:45 GMT

ಅಜ್ಮಾನ್, ಎ.29: ಸ್ಟರ್ಜ್ ವೆಬರ್ ಗ್ಲಾಕೋಮ ಎಂಬ ಅಪರೂಪದ ಕಣ್ಣಿನ ಕಾಯಿಲೆ ಪೀಡಿತ ನವಜಾತ ಶಿಶುವಿಗೆ ಅಜ್ಮಾನ್‌ನ ತುಂಬೆ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಅಪರೂಪದ ಅನುವಂಶಿಕ ಕಾಯಿಲೆಯಾಗಿರುವ ಇದು 50 ಸಾವಿರ ನವಜಾತ ಶಿಶುಗಳಲ್ಲಿ ಒಂದಕ್ಕೆ ಬಾಧಿಸಬಹುದು. ನಿರ್ಲಕ್ಷ ಮಾಡಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಈ ಕಣ್ಣಿನ ಕಾಯಿಲೆ ಪೀಡಿತ 7 ದಿನದ ಶಿಶುವಿಗೆ ನೇತ್ರಶಾಸ್ತ್ರಜ್ಞ ಡಾ. ಅಹ್ಮದ್ ಅತಿಫ್ ಅಬ್ದುಲ್‌ ಹಮಿದ್ ಶಬಾನ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.

ಮಗುವಿನ ಮುಖದ ಎರಡೂ ಬದಿಗಳಲ್ಲಿ ಮತ್ತು ದೇಹದಲ್ಲಿ ಕಲೆಗಳಿದ್ದವು. ಇದಕ್ಕಿಂತ ಗಂಭೀರವಾದ ವಿಷಯವೆಂದರೆ, ಶಿಶುವಿನ ಎರಡೂ ಕಣ್ಣುಗಳ ಒಳಗೆ ವಿಪರೀತ ಒತ್ತಡದ ಕಾರಣ ಕಣ್ಣಿನ ದೃಷ್ಟಿ ಮಸುಕಾಗುವ ಸಾಧ್ಯತೆಯಿತ್ತು. ನವಜಾತ ಶಿಶು ತಜ್ಞರು ಹಾಗೂ ನರವಿಜ್ಞಾನ ತಜ್ಞ ವೈದ್ಯರೊಂದಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ರೋಗವನ್ನು ಪತ್ತೆಹಚ್ಚಿ ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು.

7 ದಿನದ ಹಸುಳೆಯ ಎರಡು ಕಣ್ಣಿಗೆ ತಲಾ ಎರಡರಂತೆ, ಒಟ್ಟು ನಾಲ್ಕು ಶಸ್ತ್ರಚಿಕಿತ್ಸೆ ನಡೆಸುವುದು ನಿಜಕ್ಕೂ ಸವಾಲಿನ ಕಾರ್ಯವಾಗಿತ್ತು. ಇದೊಂದು ಕಠಿಣ ನಿರ್ಧಾರವಾಗಿತ್ತು ಮತ್ತು ಮಗುವಿನ ಪೋಷಕರ ಸಹಿತ ಎಲ್ಲರಲ್ಲೂ ಆತ್ಮವಿಶ್ವಾಸದ ಅಗತ್ಯವಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಗುವಿನ ಸಮಸ್ಯೆ ಎಳವೆಯಲ್ಲಿಯೇ ಪರಿಹಾರವಾದ ಬಗ್ಗೆ ನಮಗೆ ಸಂತಸವಾಗಿದೆ ಎಂದು ಡಾ. ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News