ಮಸೀದಿ ನಿರ್ಮಿಸಿದ ಕ್ರೈಸ್ತ ಉದ್ಯಮಿಯಿಂದ 800 ಮುಸ್ಲಿಂ ಕಾರ್ಮಿಕರಿಗಾಗಿ ಇಫ್ತಾರ್

Update: 2019-05-09 11:19 GMT

ದುಬೈ, ಮೇ 9: ಕಳೆದ ವರ್ಷ ಫುಜೈರಾಹ್ ಎಂಬಲ್ಲಿ ತಾನು 53 ಕಂಪೆನಿಗಳಿಗೆ ಬಾಡಿಗೆಗೆ ನೀಡಿದ್ದ ಕಾರ್ಮಿಕರ ವಸತಿ ಸಮುಚ್ಛಯದಲ್ಲಿ ಅಲ್ಲಿನ ಭಾರತೀಯ ಮುಸ್ಲಿಂ ಕಾರ್ಮಿಕರಿಗಾಗಿ ಮಸೀದಿಯೊಂದನ್ನು ನಿರ್ಮಿಸಿ ಎಲ್ಲರ ಮನ ಗೆದ್ದಿದ್ದ ಕೇರಳದ ಕಾಯಂಕುಳಂ ಮೂಲದ 49 ವರ್ಷದ ಸಾಜಿ ಚೆರಿಯನ್ ಎಂಬ ಕ್ರೈಸ್ತ ಉದ್ಯಮಿ, ಈ ಬಾರಿ ರಮಝಾನ್ ಸಂದರ್ಭ ಸುಮಾರು 800 ಕಾರ್ಮಿಕರಿಗೆ ಇಫ್ತಾರ್ ಏರ್ಪಡಿಸಿದ್ದಾರೆ.

 ಈ ಇಫ್ತಾರ್ ಕೂಟದಲ್ಲಿ ಕಾರ್ಮಿಕರಿಗೆ ಖರ್ಜೂರ, ತಾಜಾ ಹಣ್ಣುಗಳು, ತಿನಿಸುಗಳು, ಹಣ್ಣಿನ ರಸ, ಬಿರಿಯಾನಿ ಮತ್ತು ನೀರು ಒದಗಿಸಲಾಗುತ್ತದೆ. ಪ್ರತಿ ಇಪ್ತಾರ್ ಸಂದರ್ಭ ಬೇರೆ ಬೇರೆ ವಿಧದ ಬಿರಿಯಾನಿ ಕಾರ್ಮಿಕರಿಗೆ ಉಣ ಬಡಿಸುವುದಾಗಿಯೂ ಅವರು ಹೇಳಿದ್ದಾರೆ.

ರಮಝಾನ್ ಸಂದರ್ಭ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲೆಂದು ಕಾರ್ಮಿಕರು ಟ್ಯಾಕ್ಸಿಗೆ ಹಣ ತೆತ್ತು ತೆರಳುತ್ತಿದ್ದುದನ್ನು ಗಮನಿಸಿ ಅವರು ಮರಿಯಂ ಉಮ್ಮ್ ಈಸಾ ಮಸೀದಿ ನಿರ್ಮಿಸಿದ್ದರು.

ಸಾಜಿ ಚೆರಿಯನ್ ನಿರ್ಮಿಸಿರುವ ಮಸೀದಿ ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಕಾಂಪ್ಲೆಕ್ಸ್ ನ ಅಲ್ ಹಯ್ಲ್ ಕೈಗಾರಿಕಾ ಪ್ರದೇಶದಲ್ಲಿದ್ದು ಒಮ್ಮೆಗೆ 250 ಮಂದಿಗೆ ಅಲ್ಲಿ ಸ್ಥಳಾವಕಾಶವಿದ್ದು, ಹೊರಗೆ ಇಂಟರ್-ಲಾಕ್ ಹಾಕಲ್ಪಟ್ಟ ಪ್ರದೇಶದಲ್ಲಿ ಇನ್ನೂ 700 ಮಂದಿ ಪ್ರಾರ್ಥನೆ  ಸಲ್ಲಿಸಬಹುದಾಗಿದೆ.

2003ರಲ್ಲಿ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಕೈಯ್ಯಲ್ಲಿ ಕೆಲವು ನೂರು ದಿರ್ಹಂ ಇಟ್ಟುಕೊಂಡು ಆಗಮಿಸಿದ್ದ ಚೆರಿಯನ್ ಇದೀಗ ವಿವಿಧ ಕಂಪೆನಿಗಳ ಹಿರಿಯ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ  ಅದೇ ಕಾಂಪ್ಲೆಕ್ಸ್ ನಲ್ಲಿರುವ ಹವಾನಿಯಂತ್ರಿತ  ಸಭಾಂಗಣದಲ್ಲಿ ಇಫ್ತಾರ್ ಕೂಟ ಏರ್ಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News