ಎಮಿರೇಟ್ಸ್‌ನ ಅತೀದೊಡ್ಡ ಮಸೀದಿ ಉದ್ಘಾಟಿಸಿದ ಶಾರ್ಜಾ ದೊರೆ

Update: 2019-05-12 18:46 GMT

ಶಾರ್ಜಾ,ಮೇ.12: ಶಾರ್ಜಾ ದೊರೆ ಮತ್ತು ಪರಮೋಚ್ಚ ಮಂಡಳಿ ಸದಸ್ಯ ಶೇಕ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಕಾಸಿಮ್ ಅವರು ಎಮಿರೇಟ್ಸ್‌ನ ಅತ್ಯಂತ ದೊಡ್ಡ ಮಸೀದಿಯನ್ನು ಉದ್ಘಾಟಿಸಿದರು. 2014ರಲ್ಲಿ ನಿರ್ಮಾಣ ಆರಂಭಗೊಂಡು ಸದ್ಯ ಉದ್ಘಾಟನೆಗೊಂಡಿರುವ 300 ಮಿಲಿಯನ್ ದಿರ್ಹಮ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾರ್ಜಾ ಮಸೀದಿಯಲ್ಲಿ ಏಕಕಾಲಕ್ಕೆ 25,000 ಜನರು ಪ್ರಾರ್ಥಿಸಬಹುದಾಗಿದೆ.

ಎರಡು ಮಿಲಿಯನ್ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಸೀದಿ, ಅದರ ಉದ್ಯಾನವನ ಮತ್ತು ಇತರ ಸೌಲಭ್ಯಗಳಿಗೆ ಮುಸ್ಲಿಮೇತರರಿಗೂ ಪ್ರವೇಶ ನೀಡಲಾಗಿದ್ದು ಅವರಿಗಾಗಿಯೇ ಪ್ರತ್ಯೇಕ ದಾರಿಗಳು ಮತ್ತು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಈ ಮಸೀದಿಯಲ್ಲಿ ಒಂದು ಬೃಹತ್ ಗ್ರಂಥಾಲಯವೂ ಇದ್ದು ಅದರಲ್ಲಿ ಇಸ್ಲಾಮ್‌ನ ಅನೇಕ ಮೂಲ ಪುಸ್ತಕಗಳೂ ಇವೆ. ಮಸೀದಿಯ ಆವರಣದಲ್ಲಿರುವ ವಿವಿಧ ವಾಹನ ನಿಲುಗಡೆ ಪ್ರದೇಶಗಳಲ್ಲಿ ಏಕಕಾಲಕ್ಕೆ 2,200 ಕಾರ್‌ಗಳು ಮತ್ತು ಬಸ್ಸುಗಳನ್ನು ನಿಲ್ಲಿಸಬಹುದಾಗಿದೆ.

ಮಸೀದಿಯ ಸುತ್ತ ತಿರುಗಾಡಲು ಬಯಸುವ ಪ್ರವಾಸಿಗರ ಅನುಕೂಲಕ್ಕಾಗಿ ರಬ್ಬರ್ ಟ್ರಾಕ್ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮ್ಯೂಸಿಯಂ,ಕಾರಂಜಿಗಳು ಮತ್ತು ಇತರ ಮಳಿಗೆಗಳೂ ಇವೆ ಎಂದು ಸ್ಥಳೀಯ ಸುದ್ದಿವಾಹಿನಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News