ಯುಎಇ ಕರಾವಳಿಯಲ್ಲಿ ಹಡಗುಗಳಿಗೆ ಹಾನಿ: ಸೌದಿ ಅರೇಬಿಯ, ಯುಎಇ ಆರೋಪ

Update: 2019-05-13 18:06 GMT

ಟೆಹರಾನ್ (ಇರಾನ್), ಮೇ 13: ಯುಎಇ ಕರಾವಳಿಯ ಸಮುದ್ರದಲ್ಲಿ ನಡೆದ ದಾಳಿಗಳಲ್ಲಿ ತೈಲ ಟ್ಯಾಂಕರ್‌ಗಳು ಸೇರಿದಂತೆ ಹಲವಾರು ಹಡಗುಗಳು ಹಾನಿಗೊಂಡಿರುವುದು ‘ಆಘಾತಕಾರಿ’ ಎಂಬುದಾಗಿ ಇರಾನ್ ಸೋಮವಾರ ಹೇಳಿದೆ.

ತಮ್ಮ ಹಲವಾರು ಹಡಗುಗಳು ಹಾನಿಗೊಳಗಾಗಿವೆ ಎಂಬುದಾಗಿ ಯುಎಇ ಮತ್ತು ಸೌದಿ ಅರೇಬಿಯಗಳು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

 ‘‘ಒಮನ್ ಸಮುದ್ರದಲ್ಲಿ ನಡೆದಿರುವ ಘಟನೆಗಳು ಆಘಾತಕಾರಿ ಹಾಗೂ ವಿಷಾದನೀಯ’’ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ದಾಳಿಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಕರೆ ನೀಡಿದ್ದಾರೆ ಹಾಗೂ ಸಾಗರ ಭದ್ರತೆಯನ್ನು ಹದಗೆಡಿಸಲು ವಿದೇಶಿ ಶಕ್ತಿಗಳು ನಡೆಸುತ್ತಿರುವ ‘ಸಾಹಸ’ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಯುಎಇಯ ಫುಜೈರಾ ಬಂದರಿನ ಸಮುದ್ರದಲ್ಲಿ ವಿವಿಧ ದೇಶಗಳ ನಾಲ್ಕು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ರವಿವಾರ ತಿಳಿಸಿದೆ.

ತನ್ನ ಎರಡು ತೈಲ ಟ್ಯಾಂಕರ್‌ಗಳಿಗೆ ಹಾನಿಯಾಗಿದೆ ಎಂಬುದಾಗಿ ಸೌದಿ ಅರೇಬಿಯ ಸೋಮವಾರ ಬೆಳಗ್ಗೆ ಹೇಳಿದೆ.

ಫುಜೈರಾ ಬಂದರು, ಹೋರ್ಮುಝ್ ಜಲಸಂಧಿಯನ್ನು ನಿವಾರಿಸಬಹುದಾದ ಯುಎಇಯ ಅರಬ್ಬಿ ಸಮುದ್ರದಲ್ಲಿರುವ ಏಕೈಕ ತಾಣವಾಗಿದೆ. ಹೋರ್ಮುಝ್ ಜಲಸಂಧಿಯ ಮೂಲಕ ಹೆಚ್ಚಿನ ಕೊಲ್ಲಿ ತೈಲ ರಫ್ತು ಹಾದು ಹೋಗುತ್ತದೆ. ಒಂದು ವೇಳೆ, ಅಮೆರಿಕದೊಂದಿಗೆ ಸೇನಾ ಸಂಘರ್ಷ ಏರ್ಪಟ್ಟರೆ ಹೋರ್ಮುಝ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಪದೇ ಪದೇ ಬೆದರಿಕೆ ಹಾಕುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಯುದ್ಧನೌಕೆ, ಬಿ-52 ಬಾಂಬರ್ ವಿಮಾನಗಳು ಕೊಲ್ಲಿಗೆ

ಅಮೆರಿಕ ಕಳುಹಿಸಿರುವ ಬಿ-52 ಬಾಂಬರ್ ವಿಮಾನಗಳು ಈಗಾಗಲೇ ಖತರ್‌ನಲ್ಲಿರುವ ಅಮೆರಿಕದ ನೆಲೆಗೆ ಆಗಮಿಸಿವೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. ಇರಾನ್‌ನಿಂದ ಹೊಮ್ಮಿದ ಬೆದರಿಕೆಗಳ ಹಿನ್ನೆಲೆಯಲ್ಲಿ ಈ ವಿಮಾನಗಳನ್ನು ಕಳುಹಿಸುತ್ತಿರುವುದಾಗಿ ಅಮೆರಿಕ ಹೇಳಿದೆ.

ಅಮೆರಿಕವು ಈಗಾಗಲೇ ಕೊಲ್ಲಿಗೆ ವಿಮಾನವಾಹಕ ಯುದ್ಧನೌಕೆ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಹಾಗೂ ಕ್ಷಿಪಣಿ ವ್ಯವಸ್ಥೆಗಳನ್ನು ಕಳುಹಿಸಿಕೊಟ್ಟಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News