ಇಡೀ ಜಗತ್ತಿನ ಪೂರೈಕೆ ಮೇಲೆ ನಡೆದ ದಾಳಿ: ಸೌದಿ

Update: 2019-05-15 18:19 GMT

ರಿಯಾದ್ (ಸೌದಿ ಅರೇಬಿಯ), ಮೇ 15: ತನ್ನ ಎರಡು ತೈಲ ಟ್ಯಾಂಕರ್‌ಗಳು ಮತ್ತು ಪ್ರಮುಖ ಪೈಪ್‌ಲೈನೊಂದರ ಮೇಲೆ ನಡೆದಿರುವ ದಾಳಿಗಳು, ಕೇವಲ ತನ್ನನ್ನು ಮಾತ್ರ ಗುರಿಯಾಗಿಸಿ ನಡೆದ ದಾಳಿಗಳಲ್ಲ, ಇಡೀ ಜಗತ್ತಿನ ಪೂರೈಕೆಗಳ ಮೇಲೆ ನಡೆದ ದಾಳಿಯಾಗಿದೆ ಎಂದು ಸೌದಿ ಅರೇಬಿಯ ಬುಧವಾರ ಹೇಳಿದೆ.

ಯೆಮನ್‌ನ ಹೌದಿ ಬಂಡುಕೋರರು ನಡೆಸಿದ್ದಾರೆನ್ನಲಾದ ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯವು ಮಂಗಳವಾರ ತನ್ನ ಪ್ರಮುಖ ತೈಲ ಸಾಗಣೆ ಪೈಪ್‌ಲೈನೊಂದನ್ನು ಮುಚ್ಚಿದೆ.

ಅದಕ್ಕೂ ಮುನ್ನ ಎರಡು ಸೌದಿ ತೈಲ ಟ್ಯಾಂಕರ್‌ಗಳು ಸೇರಿದಂತೆ ನಾಲ್ಕು ವಾಣಿಜ್ಯ ಹಡಗುಗಳ ಮೇಲೆ ನಿಗೂಢ ದಾಳಿಯಾಗಿದ್ದು ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

‘‘ಈ ಭಯೋತ್ಪಾದನೆ ಮತ್ತು ಬುಡಮೇಲು ಕೃತ್ಯಗಳು ಸೌದಿ ಅರೇಬಿಯವನ್ನು ಮಾತ್ರ ಗುರಿಮಾಡಿರುವುದಲ್ಲ, ಜಾಗತಿಕ ತೈಲ ಪೂರೈಕೆಗಳ ಭದ್ರತೆ ಮತ್ತು ಜಾಗತಿಕ ಆರ್ಥಿಕತೆಯನ್ನೂ ಗುರಿಯಾಗಿಸಿವೆ ಎಂಬ ಅಭಿಪ್ರಾಯಕ್ಕೆ ಸಚಿವ ಸಂಪುಟ ಬಂದಿದೆ’’ ಎಂದು ಮಂಗಳವಾರ ಸಂಜೆ ಜಿದ್ದಾದಲ್ಲಿ ದೊರೆ ಸಲ್ಮಾನ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News