ಸಭ್ಯತೆ ಉಲ್ಲಂಘಿಸಿದವರಿಗೆ ಕಾದಿದೆ ಭಾರೀ ದಂಡ

Update: 2019-05-25 18:12 GMT

   ಜಿದ್ದಾ, ಮೇ 25: ಸಾರ್ವಜನಿಕ ನಡವಳಿಕೆಗೆ ಸಂಬಂಧಿಸಿ ಸೌದಿ ಅರೇಬಿಯದಲ್ಲಿ ಜಾರಿಗೊಳಿಸಲಾಗಿರುವ 10 ನಿಯಮಾವಳಿಗಳ ಪೈಕಿ ಯಾವುದೇ ಒಂದನ್ನು ಉಲ್ಲಂಘಿಸಿದಲ್ಲಿ ಅವರಿಗೆ 5 ಸಾವಿರ ರಿಯಾಲ್ ದಂಡವಿಧಿಸಲಾಗುವುದು. ಸಾರ್ವಜನಿಕ ಸಭ್ಯತೆಯ ಉಲ್ಲಂಘನೆಗಳಿಗೆ ಸಂಬಂಧಿಸಿದ ಅಪರಾಧಗಳ ಪಟ್ಟಿಯೊಂದನ್ನು ಸೌದಿ ಆಡಳಿತ ಪ್ರಕಟಿಸಿದ್ದು, ಅವುಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕಾನೂನೊಂದನ್ನು ಶನಿವಾರದಂದು ಸೌದಿ ಸಾಮ್ರಾಜ್ಯದಾದ್ಯಂತ ಜಾರಿಗೆ ತರಲಾಗಿದೆ.

  ಪಾರ್ಕ್‌ಗಳು,ಬೀಚುಗಳು, ಮಾಲ್‌ಗಳು, ಹೊಟೇಲ್‌ಗಳು ಹಾಗೂ ರೆಸ್ಟಾರೆಂಟ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸೌದಿ ಸಮಾಜದ ಮೌಲ್ಯಗಳು, ತತ್ವಗನ್ನು ಎತ್ತಿಹಿಡಿಯುವಂತಹ ನಿಯಮಾವಳಿಗಳಿಗೆ ಸೌದಿಯ ಸಂಪುಟವು ಕಳೆದ ತಿಂಗಳು ಅನುಮೋದನೆ ನೀಡಿತ್ತು.

  ‘‘ ಇಂತಹ ನಿಯಮಾವಳಿಗಳನ್ನು ಜಾರಿಗೊಳಿಸಿರುವ ರಾಷ್ಟ್ರ ಕೇವಲ ಸೌದಿ ಅರೇಬಿಯ ಒಂದೇ ಅಲ್ಲ. ಹಲವಾರು ರಾಷ್ಟ್ರಗಳು ಈಗಾಗಲೇ ಅವನ್ನು ಜಾರಿಗೊಳಿಸಿವೆ . ಈ ನಿಯಮಾವಳಿಗಳು ಪೌರರು ಹಾಗೂ ಅನಿವಾಸಿಗಳಿಗೂ ಅನ್ವಯವಾಗುತ್ತೆ’’ ಎಂದು ಸೌದಿ ಸಂಪುಟ ಶೂರಾ ಕೌನ್ಸಿಲ್‌ನ ಸದಸ್ಯ ಡಾ. ಮುವಾದಿ ಅಲ್ ಮದಾಬ್ ಹೇಳಿದ್ದಾರೆ.

  ಸೌದಿಯಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಈ ನೂತನ ನಿಯಮಾವಳಿಗಳು, ವ್ಯಕ್ತಿಗಳಿಗೆ ತಾವು ದೇಶಕ್ಕೆ ಆಗಮಿಸುವ ಪ್ರವಾಸಿಗರ ಉಪಸ್ಥಿತಿಯಲ್ಲಿ ಹೇಗೆ ವರ್ತಿಸಬೇಕೆಂಬ ಬಗ್ಗೆ ಅರಿವು ಮೂಡಲು ನೆರವಾಗಲಿದೆಯೆಂದು ಅವರು ಹೇಳಿದ್ದಾರೆ.

ಸಾರ್ವಜನಿಕ ಸಭ್ಯತೆಗೆ ಸಂಬಂಧಿಸಿ ಜಾರಿಗೊಳಿಸಲಾದ ನೂತನ ನಿಯಮಾವಳಿಗಳ ಪ್ರಕಾರ ವ್ಯಕ್ತಿಗಳು ಗೌರವಯುತವಾದ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಹಾಗೂ ಸಾರ್ವಜನಿಕ ಸಭ್ಯತೆಗೆ ಧಕ್ಕೆಯುಂಟು ಮಾಡುವಂತಹ ಛಾಯಾಚಿತ್ರಗಳನು ತೆಗೆಯುವುದು ಹಾಗೂ ಅಸಭ್ಯ ಪದಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News