ಜಾಗತಿಕ ವಿಜ್ಞಾನ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾರತದ ಬಾಲಕ ಶಾಮಿಲ್ ಕರೀಂ ನಂ.1

Update: 2019-05-26 16:04 GMT

ದುಬೈ,ಮೇ 26: ವಿದ್ಯುತ್ ಪೋಲಾಗುವುದನ್ನು ಕನಿಷ್ಠಗೊಳಿಸುವ ಮತ್ತು ಬೀದಿದೀಪಗಳನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸುವ ತನ್ನ ಪರಿಕಲ್ಪನೆಗಾಗಿ ದುಬೈನಲ್ಲಿ ನೆಲೆಸಿರುವ ಭಾರತೀಯ ಹದಿಹರೆಯದ ಬಾಲಕ ಶಾಮಿಲ್ ಕರೀಂ ಅವರು ಪ್ರತಿಷ್ಠಿತ ‘ಗೂಗಲ್ ಸೈನ್ಸ್ ಫೇರ್’ ಜಾಗತಿಕ ಸ್ಪರ್ಧೆಯ ಅಂತಿಮ ಸುತ್ತು ತಲುಪಿರುವ 100 ಪ್ರಾದೇಶಿಕ ಸ್ಪರ್ಧಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಂತಿಮ 20ರ ಪಟ್ಟಿಯನ್ನು ಶೀಘ್ರವೇ ಪ್ರಕಟಿಸುವ ನಿರೀಕ್ಷೆಯಿದೆ.

ದುಬೈನ ಇಂಡಿಯನ್ ಹೈಸ್ಕೂಲ್‌ನಲ್ಲಿ 11ನೇ ಗ್ರೇಡ್‌ನ ವಿದ್ಯಾರ್ಥಿಯಾಗಿರುವ ಮೂಲತಃ ಚೆನ್ನೈನ ಕರೀಂ (15) ಸಾವಿರಾರು ಪ್ರವೇಶಗಳಿಂದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ವಿನೂತನ ಪರಿಕಲ್ಪನೆಯ ಅವರ ಯೋಜನೆಯು ರಸ್ತೆಯಲ್ಲಿ ಕಾರು ಅಥವಾ ವ್ಯಕ್ತಿಯು ಹಾದು ಹೋಗುವುದನ್ನು ಗುರುತಿಸುತ್ತದೆ ಮತ್ತು ಮುಂದಿನ ಬೀದಿದೀಪವನ್ನು ಉಜ್ವಲಗೊಳಿಸುತ್ತದೆ ಹಾಗೂ ಹಿಂದಿನ ದೀಪವನ್ನು ಮಂದಗೊಳಿಸುತ್ತದೆ,ತನ್ಮೂಲಕ ವಿದ್ಯುಚ್ಛಕ್ತಿಯ ಉಳಿತಾಯಕ್ಕೆ ನೆರವಾಗುತ್ತದೆ.

ಕರೀಂ ತನ್ನ ಯೋಜನೆಯಲ್ಲಿ ರಸ್ತೆಯಲ್ಲಿ ಹಾದು ಹೋಗುವ ಕಾರುಗಳು ಅಥವಾ ಜನರ ನೆರಳನ್ನು ಗುರುತಿಸಲು ದುಬಾರಿ ಬೆಲೆಯ ಇನ್‌ಫ್ರಾ ರೆಡ್ ಆಧರಿತ ಮೋಷನ್ ಡಿಟೆಕ್ಟರ್‌ಗಳ ಬದಲಿಗೆ ಫೋಟೊ-ರಸಿಸ್ಟರ್‌ಗಳನ್ನು ಬಳಸಿದ್ದಾರೆ. ಹೀಗಾಗಿ ಅವರ ಯೋಜನೆಯು ಶೇ.63ರಷ್ಟು ಅಗ್ಗವಾಗಿದೆ. ಸಾಧನವು ನೆರಳನ್ನು ಗುರುತಿಸಿದ ಬಳಿಕ ರಸ್ತೆ ಬಳಕೆದಾರನಿಗಾಗಿ ಮುಂದಿನ ದೀಪವು ಉಜ್ವಲವಾಗಿ ಬೆಳಗುತ್ತದೆ ಮತ್ತು ಹಿಂದಿನ ದೀಪವು ಮಂದಗೊಳ್ಳುತ್ತದೆ.

 ಸುರಕ್ಷತೆಯ ಕಾರಣಗಳಿಂದಾಗಿ ಕಟ್ಟಡಗಳ ಕಾರಿಡಾರ್‌ ಗಳಲ್ಲಿರುವಂತೆ ಬೀದಿ ದೀಪಗಳನ್ನು ಆಫ್ ಮಾಡಿ ಮತ್ತು ನಂತರ ದಿಢೀರ್‌ ರನೆ ಬೆಳಗುವಂತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಗತ್ಯವಿದ್ದೆಡೆ ಉಜ್ವಲ ಮತ್ತು ಮಂದಗೊಳ್ಳುವಂತೆ ಅವುಗಳನ್ನು ಹೆಚ್ಚು ಸ್ಮಾರ್ಟ್‌ಗೊಳಿಸುವುದು ಪರಿಹಾರವಾಗಿದೆ ಎಂದು ಕರೀಂ ಹೇಳಿದ್ದನ್ನು ಗಲ್ಪ್ ನ್ಯೂಸ್ ಉಲ್ಲೇಖಿಸಿದೆ.

ವಿದ್ಯುತ್ ಪೋಲಾಗದಂತೆ ಪರಿಹಾರವನ್ನು ಕಂಡುಕೊಳ್ಳಲು ತನ್ನ ತಂದೆಯೇ ತನಗೆ ಸ್ಫೂರ್ತಿಯಾಗಿದ್ದಾರೆ ಎಂದಿರುವ ಕರೀಂ,‘‘ ಅದೊಂದು ದಿನ ತಡರಾತ್ರಿ ನಾವು ಪಾರ್ಕ್‌ನಲ್ಲಿದ್ದಾಗ ಅಲ್ಲಿಯ ಎಲ್ಲ ದೀಪಗಳೂ ಉರಿಯುತ್ತಿದ್ದವು. ಇದನ್ನು ತಪ್ಪಿಸಲು ನಾವೂ ಏನಾದರೂ ಮಾಡಲು ಸಾಧ್ಯವೇ ಎಂದು ತಂದೆ ನನ್ನನ್ನು ಪ್ರಶ್ನಿಸಿದ್ದರು. ಅಂದೇ ನಾನು ಬೀದಿ ದೀಪಗಳನ್ನು ಸ್ಮಾರ್ಟ್‌ಗೊಳಿಸುವ ಯೋಜನೆಯ ನಿರ್ಧಾರ ಮಾಡಿದ್ದೆ ’’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News