ರಾಜಕೀಯ ಅರಾಜಕತೆ ಸೃಷ್ಟಿಸಿದ ಆರೋಪ: ಬಾಲಕನಿಗೆ ಗಲ್ಲು ಶಿಕ್ಷೆ ವಿಧಿಸುವುದಿಲ್ಲ ಎಂದ ಸೌದಿ

Update: 2019-06-16 08:04 GMT

ಅಬುಧಾಬಿ, ಜೂ.16: ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಅರಾಜಕತೆ ಸೃಷ್ಟಿಸಿದ ಆರೋಪದಲ್ಲಿ 2014ರಲ್ಲಿ ಬಂಧಿತನಾಗಿದ್ದ ಬಾಲಕನನ್ನು ಗಲ್ಲಿಗೇರಿಸುವುದಿಲ್ಲ, ಆದರೆ 2022ರೊಳಗೆ ಬಿಡುಗಡೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನ ಗಲ್ಲುಶಿಕ್ಷೆ ಬಾಕಿ ಇರುವ ಹಿನ್ನೆಲೆಯಲ್ಲಿ ರಾಯ್ಟರ್ಸ್ ಕೇಳಿದ ಪ್ರಶ್ನೆಗೆ ಈ ಅಧಿಕಾರಿ ಉತ್ತರಿಸಿದ್ದಾರೆ.

ಮುರ್ತಝಾ ಎಂಬ ಬಾಲಕನನ್ನು 2014ರ ಸೆಪ್ಟೆಂಬರ್‍ನಲ್ಲಿ ಬಂಧಿಸಲಾಗಿದ್ದು, ಆತನಿಗೆ ಆರಂಭದಲ್ಲಿ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಆತನ ವಯಸ್ಸಿನ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಶಿಕ್ಷೆ ಅಮಾನತುಗೊಳಿಸಲಾಗಿತ್ತು. ಆದರೆ ಈ ಶಿಕ್ಷೆ ಮೇಲ್ಮನವಿಗೆ ಅನುಗುಣವಾಗಿರುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆತನನ್ನು ಗಲ್ಲಿಗೇರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಾಲಕನ ಅಪರಾಧದ ತೀವ್ರತೆ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಅಭಿಯೋಜಕರು ಬಾಲಕನಿಗೆ ಗಲ್ಲುಶಿಕ್ಷೆ ವಿಧಿಸುವಂತೆ ವಾದಿಸಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸೇರಿದಂತೆ ಹಲವು ಮಾನವಹಕ್ಕು ಸಂಸ್ಥೆಗಳು ಆಪಾದಿಸಿದ್ದವು. ಈ ಪೈಕಿ ಕೆಲ ಅಪರಾಧಗಳು ಆತ 10ನೇ ವಯಸ್ಸಿನಲ್ಲಿದ್ದಾಗ ಮಾಡಿದ ಅಪರಾಧಗಳು ಎಂದು ಪ್ರತಿಪಾದಿಸಿದ್ದವು.

ಸೌದಿಯಲ್ಲಿ ಭಯೋತ್ಪಾದಕ ಅಪರಾಧಗಳಿಗಾಗಿ ಕಳೆದ ಏಪ್ರಿಲ್‍ನಲ್ಲಿ 37 ಮಂದಿಯನ್ನು ಗಲ್ಲಿಗೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News