ಗಲ್ಪ್ ವೈದ್ಯಕೀಯ ವಿವಿ: ಸಂಶೋಧನಾ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಮೊದಲ ಬ್ಯಾಚ್

Update: 2019-06-24 05:05 GMT

ದುಬೈ : ಜಿಇಎಂಎಸ್ ಅಂತರ್ ರಾಷ್ಟ್ರೀಯ ಶಾಲೆಯ ಸಹಯೋಗದಲ್ಲಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ಕಳೆದ ವರ್ಷ ಆರಂಭಿಸಿದ ‘ಯುಎಇಯ ಭವಿಷ್ಯದ ವಿಜ್ಞಾನಿಗಳು’ ಕಾರ್ಯಕ್ರಮದ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಇಂಟರ್ನ್‌ಶಿಪ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಈ ಕಾರ್ಯಕ್ರಮವನ್ನು 2018 ಜನವರಿಯಲ್ಲಿ ಆರಂಭಿಸಲಾಗಿದ್ದು, ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೊಸಾಮ್ ಹಮ್ದಿ, ವಿದ್ಯಾರ್ಥಿಗಳು ಸಂಶೋಧನೆಗೆ ತೆರೆದುಕೊಳ್ಳುವ ಉದ್ದೇಶದಿಂದ ‘ಯುಎಇಯ ಭವಿಷ್ಯದ ವಿಜ್ಞಾನಿಗಳು’ ಕಾರ್ಯಕ್ರಮ ಆರಂಭಿಸಲಾಯಿತು. ಇದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ನವೀನತೆ ಹಾಗೂ ಜಿಜ್ಞಾಸೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.

ಕಲಿಕೆ ಸಂಶೋಧನೆ ಹಾಗೂ ಸಾಮಾಜಿಕೀಕರಣದ ಮೂಲಕ ಆರಂಭವಾಗುತ್ತದೆ. ಕಲಿಕೆಗೆ ಇಂತಹ ಪರಿಸರ ಬಾಲ್ಯದಲ್ಲೆ ಇರುವುದು ಮುಖ್ಯ. ಈ ಕಾರ್ಯಕ್ರಮದ ಮೊದಲ ಬ್ಯಾಚ್ ಈಗಾಗಲೇ ತಮ್ಮ ಸಂಶೋಧನಾ ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು.

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಸಲೇಂ ಚೌಯೆಬ್, ಸಂಶೋಧನೆ ಜಗತ್ತನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿರುವ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕಾರ್ಯಕ್ರಮ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ 16 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ರೋಸ್‌ಮರಿ ವುಲ್ಲೆ ಮಾತನಾಡಿ, ವಿಜ್ಞಾನ ಸಮುದಾಯದಲ್ಲಿ ಸಂಶೋಧನೆಯ ಪ್ರಾಮಖ್ಯತೆ ತಿಳಿದುಕೊಳ್ಳಲು ಈ ಕಾರ್ಯಕ್ರಮ ನೆರವು ನೀಡಿತು ಎಂದರು.

ಆದಿತ್ಯ ಮ್ಯಾಥ್ಯೂ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ವಿಜ್ಞಾನದಲ್ಲಿ ನನ್ನ ವೃತ್ತಿಜೀವನವನ್ನು ಎದುರು ನೋಡುತ್ತಿದ್ದೇನೆ ಎಂದರು. ವರ್ಷ ಬಿಜಲಿ ಮಾತನಾಡಿ, ಈ ಕಾರ್ಯಕ್ರಮದಿಂದ ಬಯೋಕೆಮೆಸ್ಟ್ರಿ ಹಾಗೂ ಕ್ಯಾನ್ಸರ್ ಸೆಲ್ ಬಯಾಲಜಿಯ ದೇಶದ ಪ್ರಮುಖ ತಜ್ಞರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದರು. ಅಹ್ಸಾನ್ ನಯಾಝ್ ಮಾತನಾಡಿ, ನಾವು ಸಾಮಾನ್ಯವಾಗಿ ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚಿನದನ್ನು ಇಲ್ಲಿ ಕಲಿತೆವು ಎಂದು ಹೇಳಿದರು.

ಜೆಇಎಂಎಸ್ ಕಾಲೇಜು ಹಾಗೂ ಕೆರಿಯರ್ ಕೌನ್ಸೆಲಿಂಗ್ ವರ್ಲ್ಡ್‌ವೈಡ್‌ನ ಸಹಾಯಕ ನಿರ್ದೇಶಕ ಡಾ. ಕಿಯರಸ್ಟನ್ ಕೊನ್ನೋರ್ಸ್‌, ಅತಿ ಹೆಚ್ಚು ಅನುಭವ ಇರುವ ಸಂಶೋಧಕರೊಂದಿಗೆ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಒಂದು ಉತ್ತಮ ಅವಕಾಶ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ತುಂಬೆ ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಪ್ರೆಸಿಸನ್ ಮೆಡಿಸಿನ್ ಪ್ರಮುಖ ಪಾತ್ರ ವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News