ಯುಎಇ ಯುವರಾಣಿ ಹಯಾ ಇಬ್ಬರು ಮಕ್ಕಳು, 31 ದಶಲಕ್ಷ ಪೌಂಡ್ ಹಣದೊಂದಿಗೆ ವಿದೇಶಕ್ಕೆ ಪರಾರಿ

Update: 2019-06-30 17:27 GMT

ಲಂಡನ್,ಜೂ. 30: ಯುಎಇನ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ 6ನೇ ಪತ್ನಿ, ಯುವರಾಣಿ ಹಯಾ ಬಿಂತ್ ಅಲ್ ಹುಸೈನ್ ಅವರು ತನ್ನ ಇಬ್ಬರು ಮಕ್ಕಳ ಜೊತೆಗೆ ಬ್ರಿಟನ್‌ಗೆ ಪರಾರಿಯಾಗಿದ್ದಾರೆಂದು ವರದಿಯಾಗಿದೆ. ಅವರು ಪರಾರಿಯಾಗುವಾಗ ತನ್ನೊಂದಿಗೆ 31 ದಶಲಕ್ಷ ಪೌಂಡ್ ಹಣವನ್ನು ಕೂಡಾ ಕೊಂಡೊಯ್ದಿರುವುದಾಗಿ ತಿಳಿದುಬಂದಿದೆ. ತಮ್ಮಿಬ್ಬರ ನಡುವಿನ ವೈವಾಹಿಕ ಬಾಂಧವ್ಯ ಮುರಿದುಬಿದ್ದ ಬಳಿಕ ಯುವರಾಣಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆಂದು ಹೇಳಲಾಗಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಯುವರಾಣಿ ಹಯಾ ಅವರು ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ. ಜೊರ್ಡಾನ್‌ನ ದೊರೆ ಅಬ್ದುಲ್ಲಾ ಅವರ ಮಲ ಸಹೋದರಿಯಾದ ಹಯಾ ಅವರು ತನ್ನ ಮಕ್ಕಳಾದ ಜಲೀಲಾ (11) ಹಾಗೂ ಝಾಯೆದ್ (7) ಜೊತೆ ಜರ್ಮನಿಗೆ ಪರಾರಿಯಾಗಿದ್ದರು ಹಾಗೂ ಜರ್ಮನಿಯಲ್ಲಿ ರಾಜಕೀಯ ಆಶ್ರಯ ಕೋರಿದ್ದರು. ಅನಂತರ ಅವರು ಪತಿಯೊಂದಿಗೆ ವಿವಾಹವಿಚ್ಛೇದನವನ್ನು ಕೋರಿದ್ದರು. ಆಕ್ಸ್‌ಫರ್ಡ್ ಶಿಕ್ಷಣ ಪಡೆದ ಹಯಾ ಅವರು ಮೇ 20ರ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಹಾಗೂ ಆಕೆಯ ಸೇವಾಕಾರ್ಯಗಳ ಕುರಿತಾದ ಸಮಗ್ರ ಸಚಿತ್ರ ವಿವರಗಳನ್ನು ಸಾಮಾಜಿಕ ಜಾಲತಾಣಗಳ ಖಾತೆಗಳೂ ಸ್ಥಗಿತಗೊಂಡಿವೆ. ದುಬೈನಿಂದ ಪರಾರಿಯಾಗಲು ಹಯಾಗೆ ಜರ್ಮನಿಯ ರಾಜತಾಂತ್ರಿಕರು ನೆರವಾಗಿದ್ದಾರೆನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವವಾಗುವ ಸಾಧ್ಯತೆಯಿದೆಯೆನ್ನಲಾಗಿದೆ.

ಹಯಾ ಅವರನ್ನು ದುಬೈಗೆ ವಾಪಸ್ ಕಳುಹಿಸುವಂತೆ ಯುಎಇ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಮಕ್ತೂಮ್ ಅವರ ಮನವಿಯನ್ನು ಜರ್ಮನಿ ಅಧಿಕಾರಿಗಳು ತಿರಸ್ಕರಿಸಿದ್ದರು.

ಈ ಮಧ್ಯೆ ದುಬೈ ರಾಜಕುಟುಂಬದ ನಿಕಟವರ್ತಿ ಮೂಲಗಳು ಕೂಡಾ ಯುವರಾಣಿ ಹಯಾ ವಿದೇಶಕ್ಕೆ ಪರಾರಿಯಾಗಿದ್ದಾರೆ ಹಾಗೂ ವಿಚ್ಛೇದನವನ್ನು ಕೋರಿದಾರೆಂಬುದನ್ನು ದೃಢಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News