ಇನ್ನು ದುಬೈ ಡ್ಯೂಟಿ ಫ್ರೀ ಮಳಿಗೆಗಳಲ್ಲಿ ರೂಪಾಯಿಯಲ್ಲೇ ಖರೀದಿಸಿ!

Update: 2019-07-04 18:18 GMT

ದುಬೈ, ಜು.4: ದುಬೈಗೆ ಪ್ರಯಾಣಿಸುವ ಭಾರತೀಯರಿಗೆ ಶುಭ ಸುದ್ದಿ ಬಂದಿದೆ. ಇನ್ನು ಅವರು ದುಬೈ ವಿಮಾನ ನಿಲ್ದಾಣದ ಯಾವುದೇ ಮಳಿಗೆಯಲ್ಲಿ ಭಾರತೀಯ ರೂಪಾಯಿಯಿಂದಲೇ ಏನನ್ನು ಬೇಕಾದರೂ ಖರೀದಿಸಬಹುದು, ಅದಕ್ಕಾಗಿ ರೂಪಾಯಿಯನ್ನು ದಿರ್ಹಮ್ ಅಥವಾ ಡಾಲರ್ ಗೆ ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. 

ಭಾರತೀಯರು ದುಬೈ ವಿಮಾನ ನಿಲ್ದಾಣದಲ್ಲಿ ರೂಪಾಯಿಯನ್ನು ದಿರ್ಹಮ್ ಅಥವಾ ಡಾಲರ್ ಗೆ ವಿನಿಮಯ ಮಾಡಿಕೊಳ್ಳುವಾಗ ವಿನಿಮಯ ದರ ಅನ್ವಯ ಆಗುವ ನಷ್ಟ ಇನ್ನು ಮುಂದೆ ತಪ್ಪಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. 

ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಎಲ್ಲ ಮೂರು ಟರ್ಮಿನಲ್ ಗಳು ಹಾಗು ಅಲ್ ಮಕ್ತುಮ್ ವಿಮಾನ ನಿಲ್ದಾಣದಲ್ಲೂ ಭಾರತೀಯ ಕರೆನ್ಸಿ ಸ್ವೀಕರಿಸಲಾಗುತ್ತದೆ. ದುಬೈ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸುವ ಹದಿನಾರನೇ ಕರೆನ್ಸಿ ಭಾರತದ ರೂಪಾಯಿ ಎಂದು ಗಲ್ಫ್ ನ್ಯೂಸ್ ಹೇಳಿದೆ.   

‘‘ಹೌದು, ನಾವು ಭಾರತೀಯ ರೂಪಾಯಿಯನ್ನು ಸ್ವೀಕರಿಸಲು ಆರಂಭಿಸಿದ್ದೇವೆ’’ ಎಂದು ದುಬೈ ಡ್ಯೂಟಿ ಫ್ರೀಯ ಸಿಬ್ಬಂದಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ಕಳೆದ ವರ್ಷ ದುಬೈ ವಿಮಾನ ನಿಲ್ದಾಣಗಳ ಮೂಲಕ ಸುಮಾರು 9 ಕೋಟಿ ಪ್ರಯಾಣಿಕರು ಹಾದು ಹೋಗಿದ್ದಾರೆ. ಹಾಗೂ ಅವರ ಪೈಕಿ 1.22 ಕೋಟಿ ಪ್ರಯಾಣಿಕರು ಭಾರತೀಯರು.

ಮೊದಲು, ದುಬೈಯ ಡ್ಯೂಟಿ ಫ್ರೀ ಅಂಗಡಿಗಳಲ್ಲಿ ಖರೀದಿ ಮಾಡುವ ಮೊದಲು ಭಾರತೀಯ ಪ್ರಯಾಣಿಕರು ರೂಪಾಯಿಯನ್ನು ಡಾಲರ್, ದಿರ್ಹಮ್ ಅಥವಾ ಯುರೋಗೆ ವಿನಿಮಯ ಮಾಡಿಕೊಳ್ಳಬೇಕಾಗಿತ್ತು.

 1983 ಡಿಸೆಂಬರ್‌ನಲ್ಲಿ ದುಬೈ ಡ್ಯೂಟಿ ಫ್ರೀ ಆರಂಭಗೊಂಡಂದಿನಿಂದ ವ್ಯವಹಾರಕ್ಕಾಗಿ ಸ್ವೀಕೃತಗೊಂಡ ಕರೆನ್ಸಿಗಳ ಪೈಕಿ ಭಾರತೀಯ ರೂಪಾಯಿ 16ನೇಯದ್ದಾಗಿದೆ.

ಏನಿದು ದುಬೈ ಡ್ಯೂಟಿ ಫ್ರೀ?

ದುಬೈಯ ಎರಡು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಸ್ಥಳೀಯ ಅಥವಾ ರಾಷ್ಟ್ರೀಯ ತೆರಿಗೆಯಿರದೆ ವಸ್ತುಗಳನ್ನು ಮಾರಾಟ ಮಾಡುವ ಕಂಪೆನಿಯ ಹೆಸರು ‘ದುಬೈ ಡ್ಯೂಟಿ ಫ್ರೀ’ (ಡಿಡಿಎಫ್). ಈ ಕಂಪೆನಿಯು ಹಲವಾರು ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.

ಈ ತೆರಿಗೆ ರಹಿತ ವಸ್ತುಗಳನ್ನು ದೇಶದಿಂದ ಹೊರಗೆ ಒಯ್ಯುವ ಪ್ರಯಾಣಿಕರಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಡಿಡಿಎಫ್ ಸರಕಾರಿ ಒಡೆತನದ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್ ಆಫ್ ದುಬೈನ ಉಪ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News