ಹಜ್ ಯಾತ್ರೆಯ ವೇಳೆ ಉಷ್ಣತೆ ಕಡಿಮೆ ಮಾಡಲು ಯೋಜನೆ

Update: 2019-07-26 17:14 GMT

ರಿಯಾದ್, ಜು. 26: ಯಾತ್ರಾರ್ಥಿಗಳಾಗಿ ಸೌದಿ ಅರೇಬಿಯಕ್ಕೆ ಹೋಗುವವರಿಗೆ ಬಿಸಿಲಿನ ತೀವ್ರತೆಯಿಂದ ರಕ್ಷಣೆ ನೀಡಲು ಆ ದೇಶದ ಸರಕಾರ ಮುಂದೆ ಬಂದಿದೆ. ಅಲ್ಲಿನ ಪವಿತ್ರ ಸ್ಥಳಗಳಲ್ಲಿರುವ ಕಾಲುದಾರಿಗಳಿಗೆ ಶಾಖ-ತಡೆ ಕೋಟಿಂಗ್ ಹಚ್ಚಲು ಅದು ಯೋಜನೆಯೊಂದನ್ನು ರೂಪಿಸಿದೆ.

 ಯೋಜನೆಯ ಮೊದಲ ಹಂತದಲ್ಲಿ ಮಿನಾದಲ್ಲಿರುವ ಪಾದಚಾರಿ ಕಾಲು ದಾರಿಗಳಿಗೆ ಶಾಖ ತಡೆ ಕೋಟಿಂಗ್ ಹಚ್ಚಲಾಗುವುದು. ಮಿನಾದಿಂದ ಜಮಾರತ್‌ವರೆಗಿನ ಸುಮಾರು 3,500 ಚದರ ಮೀಟರ್ ಕಾಲು ದಾರಿ ಈ ಯೋಜನೆಯ ವ್ಯಾಪ್ತಿಗೊಳಪಡುವುದು.

ಜಪಾನ್‌ನ ಸುಮಿಟೊಮೊ ಎಂಬ ಕಂಪೆನಿಯ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪವಿತ್ರ ಸ್ಥಳಗಳ ಮಹಾ ನಿರ್ದೇಶಕ ಅಹ್ಮದ್ ಮನ್ಶಿ ಹೇಳಿದರು.

‘‘ಶಾಯಿಬೆನ್ ಪ್ರದೇಶದಲ್ಲಿರುವ ಕಾಲು ದಾರಿಗಳ ಮೇಲ್ಮೈಯ ಉಷ್ಣತೆಯನ್ನು ಕಡಿಮೆಗೊಳಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಜಮಾರತ್‌ನಲ್ಲಿರುವ ಕಾಲು ದಾರಿಗಳನ್ನು ಈ ಯೋಜನೆಗೆ ಒಳಪಡಿಸಲಾಗುವುದು. ಹಲವು ಪವಿತ್ರ ಸ್ಥಳಗಳ ಪಾದಚಾರಿ ಕಾಲು ದಾರಿಗಳಿಗೆ ಕೋಟಿಂಗ್ ಅಳವಡಿಸಲಾಗುವುದು’’ ಎಂದರು.

ಈ ಕೋಟಿಂಗ್‌ಗಳು ಉಷ್ಣತೆಯನ್ನು 15ರಿಂದ 20 ಡಿಗ್ರಿಗಳಷ್ಟು ತಗ್ಗಿಸಲು ನೆರವಾಗುವುದು ಎಂದು ಅವರು ನುಡಿದರು.

 ಈ ವರ್ಷದ ಹಜ್ ಯಾತ್ರೆಯ ವೇಳೆ ಯೋಜನೆಯು ಪ್ರಾಯೋಗಿಕವಾಗಿ ಜಾರಿಗೆ ಬರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News