ಹಜ್ ವೇಳೆ ತುರ್ತು ಸೇವೆಗೆ 911ಕ್ಕೆ ಕರೆ ಮಾಡಿ

Update: 2019-07-27 17:20 GMT

ರಿಯಾದ್, ಜು. 27: ಹಜ್ ಸಂದರ್ಭದಲ್ಲಿ ನಿಮಗೆ ತುರ್ತು ಸಹಾಯ ಬೇಕಾಗಿದ್ದರೆ ಹಾಗೂ ಯಾರಿಗೆ ಕರೆ ಮಾಡಬೇಕೆಂದು ನಿಮಗೆ ಗೊತ್ತಿಲ್ಲದಿದ್ದರೆ, ನಿಮ್ಮ ಫೋನ್ ಎತ್ತಿಕೊಳ್ಳಿ ಹಾಗೂ 911 ಸಂಖ್ಯೆಯನ್ನು ಡಯಲ್ ಮಾಡಿ.

ನಿಮ್ಮ ತುರ್ತು ಅವಶ್ಯತೆಗಳು ಯಾವುದೇ ಇರಬಹುದು- ನಿಮಗೆ ದಾರಿ ತಪ್ಪಿರಬಹುದು ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರಬಹುದು, ಯಾವ ರಸ್ತೆಯಲ್ಲಿ ಹೋಗುವುದು ಎಂಬ ಗೊಂದಲವಿರಬಹುದು, ತುರ್ತು ವೈದ್ಯಕೀಯ ನೆರವಿನ ಅಗತ್ಯವಿರಬಹುದು, ರಸ್ತೆಯಲ್ಲಿ ಯಾವುದಾದರೂ ಪ್ರಾಣಿ ಅಡ್ಡ ಬಂದಿರಬಹುದು ಹಾಗೂ ನಿಮ್ಮ ವಸ್ತುಗಳನ್ನು ಕಳೆದುಕೊಂಡಿರಬಹುದು. ಯುವ ಹಾಗೂ ಸಮರ್ಥ ಸೌದಿಯರ ತಂಡವೊಂದು ನಿಮ್ಮ ಸಹಾಯಕ್ಕೆ ಧಾವಿಸಲಿದೆ.

ಇಂಗ್ಲಿಷ್, ಫ್ರೆಂಚ್, ಜರ್ಮನ್, ಇಂಡೋನೇಶ್ಯನ್ ಮತ್ತು ಉರ್ದು ಸೇರಿದಂತೆ ವಿವಿಧ ಭಾಷೆಗಳನ್ನು ಮಾತನಾಡುವ ತಂಡದ ಸದಸ್ಯರು, ನಿಮ್ಮ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಸಿದ್ಧರಾಗಿರುತ್ತಾರೆ.

ಈ ಸೇವೆಯು ದಿನದ 24 ಗಂಟೆ ಹಾಗೂ ವಾರದ ಏಳು ದಿನವೂ ಲಭ್ಯವಿರುತ್ತದೆ.

ಸೌದಿ ಆಂತರಿಕ ಸಚಿವಾಲಯದಲ್ಲಿರುವ ನ್ಯಾಶನಲ್ ಸೆಂಟರ್ ಫಾರ್ ಸೆಕ್ಯುರಿಟಿ ಆಪರೇಶನ್ಸ್ ಐದು ವರ್ಷಗಳ ಹಿಂದೆ ಮಕ್ಕಾದಲ್ಲಿ 911 ಕಾಲ್ ಸೆಂಟರನ್ನು ಆರಂಭಿಸಿತ್ತು. ಈಗ ಈ ಕಾಲ್ ಸೆಂಟರ್‌ಗಳನ್ನು ಇನ್ನೂ ಮೂರು ಕೇಂದ್ರಗಳಲ್ಲಿ- ರಿಯಾದ್, ಶಾರ್ಗಿಯಾ ಮತ್ತು ಮದೀನಾಗಳಲ್ಲಿ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News