ಡಾ.ಕಾಪು ಮುಹಮ್ಮದ್‌ರಿಗೆ ಅಂತರ್‌ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ

Update: 2019-08-19 15:20 GMT

ಬೆಂಗಳೂರು, ಆ.19: ಯುಎಇಯ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ಡೀನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಮೆರಿಕದ ಮಿಚಿಗನ್‌ನ ಮಡೋನ್ನಾ ವಿಶ್ವವಿದ್ಯಾನಿಲಯದ ಗೌರವ ಉಪನ್ಯಾಸಕರಾಗಿರುವ ಡಾ.ಕಾಪು ಮುಹಮ್ಮದ್‌ರಿಗೆ ಭಾರತ ಶಿಕ್ಷಣ ಪ್ರಶಸ್ತಿ 2019ರಲ್ಲಿ ಶಿಕ್ಷಣ 2019ರ ಶ್ರೇಷ್ಠತೆಗಾಗಿ ಅಂತರ್‌ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ ಲಭಿಸಿದೆ.

ಸಂಶೋಧನೆ, ಬ್ರಾಂಡಿಂಗ್, ಮಾಧ್ಯಮ ಮತ್ತು ಚಲನಚಿತ್ರ ಕ್ಷೇತ್ರದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಬ್ಲೈಂಡ್ ವಿಂಕ್ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಕಾಪು ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರನಟಿ ಸೋಹಾ ಅಲಿ ಖಾನ್ ಈ ಪ್ರಶಸ್ತಿಯನ್ನು ಡಾ.ಕಾಪು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಡಾ.ಕಾಪು, ಉತ್ತಮ ಪೋಷಕಗುಣ ಮತ್ತು ಕುಟುಂಬ ಯೋಜನೆಗಳ ಅನುಷ್ಠಾನದ ಬಗ್ಗೆ ಮಾತನಾಡಿದರು. 

ಶಾಂತಿ ಮತ್ತು ಸೌಹಾರ್ದ ಕಾಪಾಡುವಲ್ಲಿ ಪ್ರಾರ್ಥನೆ ಬಹಳ ನೆರವಾಗುತ್ತದೆ. ನಿಜ ಜಗತ್ತಿನ ಯಾವುದೇ ಉದ್ಯಮಕ್ಕೆ ಪ್ರವೇಶ ಪಡೆಯುವ ಮೊದಲು ಶಿಕ್ಷಣ ಮತ್ತು ಶೈಕ್ಷಣಿಕ ಹಿನ್ನೆಲೆ ಸಂಪೂರ್ಣವಾಗಿರಬೇಕು ಎಂದು ಅವರು ತಿಳಿಸಿದರು. ಓರ್ವ ವಿದ್ಯಾರ್ಥಿ ಸ್ನಾತಕೋತರ ಪದವಿ ಪೂರ್ಣಗೊಳಿಸಿದಾಗ ಮಾತ್ರ ಆತನ ಶೈಕ್ಷಣಿಕ ಹಿನ್ನೆಲೆ ಸಂಪೂರ್ಣವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.

ಶಿಕ್ಷಣದಲ್ಲಿ ಕಾನೂನುಬಾಹಿರ ರೀತಿಯಲ್ಲಿ ಕಾರ್ಯಾಚರಿಸುವ ಜನರೂ ಇದ್ದಾರೆ. ಯಾವುದೇ ಕಾರಣಕ್ಕೂ ಶಾರ್ಟ್‌ಕಟ್ ವಿಧಾನವನ್ನು ಅನುಸರಿಸಬಾರದು ಎಂದು ಎಚ್ಚರಿಸಿದ ಡಾ.ಕಾಪು, ನಿಗದಿತ ಅವಧಿಗಿಂತ ಮೊದಲು ಪದವಿ ಪಡೆಯಬಹುದೆಂದು ಹೇಳುವವರು ವಿದ್ಯಾರ್ಥಿಗಳನ್ನು ನಕಲಿ ಕ್ರಮಗಳಿಂದ ವಂಚಿಸುವವರಾಗಿದ್ದಾರೆ. ಜ್ಞಾನ ಮತ್ತು ಶಿಕ್ಷಣವನ್ನು ಅದಕ್ಕೆ ನಿಗದಿಪಡಿಸಲಾದ ಅವಧಿಯಲ್ಲೇ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಮಾಜ, ಸಮುದಾಯ ಮತ್ತು ದೇಶದ ಬಡಜನರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದ ಡಾ.ಕಾಪು, ಯಾರಿಗಾದರೂ ನೀಡಿದರೆ ಸಂಪತ್ತು ಕಡಿಮೆಯಾಗುವುದಿಲ್ಲ, ಬದಲಿಗೆ ನೀಡಿದವರ ಪ್ರತಿಷ್ಟೆ ಹೆಚ್ಚುತ್ತದೆ ಮತ್ತು ಅದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಇನ್ನೊಬ್ಬರಿಗೆ ನೀಡುವುದರಿಂದ ಮಾನಸಿಕ ತೃಪ್ತಿ ದೊರೆಯುತ್ತದೆ ಮತ್ತು ಶಾಶ್ವತ ಜಗತ್ತಿನಲ್ಲಿ ಅದನ್ನೇ ಲೆಕ್ಕಹಾಕಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News