ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಯುಎಇಯಲ್ಲಿ ಮೋದಿ ಹೇಳಿದ್ದು ಹೀಗೆ…

Update: 2019-08-24 17:06 GMT

ಅಬುದಾಭಿ, ಆ.24: ಜಮ್ಮುಕಾಶ್ಮೀರದಲ್ಲಿ ಕೆಲವು ಯುವಜನರು ತಪ್ಪುದಾರಿಗೆಳೆಯಲ್ಪಟ್ಟು ತೀವ್ರವಾದಿಗಳಾಗಿ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಕೈಗೆತ್ತಿಕೊಂಡಿರುವುದಕ್ಕೆ ಆ ಪ್ರದೇಶವನ್ನು ಪ್ರತ್ಯೇಕವಾಗಿರಿಸಿದ್ದೇ ಕಾರಣವಾಗಿದ್ದು,ಈ ಪಿಡುಗನ್ನ್ನು ಕೊನೆಗೊಳಿಸಲೆಂದೇ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತನ್ನ ತ್ರಿರಾಷ್ಟ್ರ ಪ್ರವಾಸದ ಎರಡನೆ ಹಂತವಾಗಿ ಯುಎಇಗೆ ಆಗಮಿಸಿರುವ ಸಂದರ್ಭದಲ್ಲಿ ಮೋದಿ ಅವರು ‘ಖಲೀಜ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು.

ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ತನ್ನ ಸರಕಾರದ ನಡೆಯನ್ನು ಮೋದಿ ಬಲವಾಗಿ ಸಮರ್ಥಿಸಿಕೊಂಡರು. ವಿಶೇಷ ಸ್ಥಾನಮಾನ ರದ್ದತಿಯು ಸಂಪೂರ್ಣವಾಗಿ ಭಾರತದ ಆಂತರಿಕ ನಡೆಯಾಗಿದ್ದು, ಅದನ್ನು ಸಂಪೂರ್ಣವಾಗಿ ಪ್ರಜಾತಾಂತ್ರಿಕ, ಮುಕ್ತ, ಪಾರದರ್ಶಕ ಹಾಗೂ ಸಾಂವಿಧಾನಿಕ ರೀತಿಯಲ್ಲಿ ನಡೆಸಲಾಗಿದೆಯೆಂದು ಅವರು ಹೇಳಿದ್ದಾರೆ. 

ಜಮ್ಮುಕಾಶ್ಮೀರದ ಕುರಿತಾಗಿ ತಾವು ಕೈಗೊಂಡಿರುವ ನಡೆಗಳ ಬಗ್ಗೆ ಯುಎಇ ಹಾಗೂ ಅದರ ನಾಯಕತ್ವ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ತಾನು ಪ್ರಶಂಸಿಸುವುದಾಗಿ ಮೋದಿ ತಿಳಿಸಿದರು. ಮೋದಿ ಅವರು ಶನಿವಾರ ಅಬುದಾಭಿಯ ಯುವರಾಜ ಮಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಜೊತೆ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News