ಅರಾಮ್ಕೊ ಮೇಲೆ ಡ್ರೋನ್ ದಾಳಿ: ಸೌದಿಯ ಅರ್ಧಕ್ಕೂ ಹೆಚ್ಚು ತೈಲ ಉತ್ಪಾದನೆಗೆ ಹೊಡೆತ

Update: 2019-09-15 08:29 GMT

ರಿಯಾದ್, ಸೆ.15: ಯೆಮನ್‍ ನ ಹೌಥಿ ಬಂಡುಕೋರರು ನಡೆಸಿದ್ದಾರೆ ಎನ್ನಲಾದ ಡ್ರೋನ್ ದಾಳಿಯಲ್ಲಿ ಸೌದಿ ಅರೇಬಿಯಾದ ತೈಲ ಸಾಮ್ರಾಜ್ಯ ಅರಾಮ್ಕೊದಲ್ಲಿ ಭಾರಿ ಬೆಂಕಿ ಸಂಭವಿಸಿದೆ. ಇದರಿಂದಾಗಿ ಹಲವು ದಿನಗಳ ಕಾಲ ಸೌದಿ ಅರೇಬಿಯಾದ ಅರ್ಧಕ್ಕೂ ಹೆಚ್ಚು ಪಾಲು ತೈಲ ಉತ್ಪಾದನೆಗೆ ಹೊಡೆತ ಬೀಳಲಿದ್ದು, ಇದು ಇರಾನ್ ಹಾಗೂ ಪರ್ಶಿಯನ್ ಗಲ್ಫ್ ನಡುವಿನ ಉದ್ವಿಗ್ನತೆ ಹೆಚ್ಚಲು ಕೂಡಾ ಕಾರಣವಾಗಿದೆ.

ಸರ್ಕಾರಿ ಸ್ವಾಮ್ಯದ ಬೃಹತ್ ತೈಲೋದ್ಯಮ ಕಂಪನಿಯಾದ ಅರಾಮ್ಕೊದ ಉತ್ಪಾದನಾ ಘಟಕಗಳ ಮೇಲೆ ಬಂಡುಕೋರ ಗುಂಪುಗಳು 10ಕ್ಕೂ ಹೆಚ್ಚು ಡ್ರೋನ್ ಗಳ ಮೂಲಕ ದಾಳಿ ನಡೆಸಿದ್ದಾರೆ. ಇದು ಇರಾನ್ ಜತೆ ಸಂಪರ್ಕ ಹೊಂದಿರುವ ಹೌಥಿ ಉಗ್ರರು ಯೆಮನ್‍ ನಲ್ಲಿ ನಾಲ್ಕು ವರ್ಷಗಳಿಂದ ನಡೆಸುತ್ತಿರುವ ಹೋರಾಟದಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ದೊಡ್ಡ ವಿಧ್ವಂಸಕ ಕೃತ್ಯಗಳಲ್ಲೊಂದಾಗಿದೆ.

1991ರ ಕೊಲ್ಲಿ ಯುದ್ಧದ ಸಮಯದಲ್ಲಿ ಸದ್ದಾಂ ಹುಸೇನ್ ಪಡೆಗಳು ನಡೆಸಿದ ಸ್ಕಡ್ ಕ್ಷಿಪಣಿ ದಾಳಿಗಳೂ ಸೇರಿದಂತೆ ಹಲವು ದಶಕಗಳಲ್ಲಿ ಸೌದಿ ಅರೇಬಿಯಾದ ತೈಲ ಮೂಲಸೌಕರ್ಯದ ಮೇಲೆ ನಡೆಯುತ್ತಿರುವ ಭಾರೀ ದಾಳಿಗಳಲ್ಲೊಂದಾಗಿದೆ. ಅರಾಮ್ಕೊ ಘಟಕದಿಂದ ನೈರುತ್ಯಕ್ಕೆ ದಟ್ಟವಾದ ಕಪ್ಪು ಹೊಗೆ ಪಸರಿಸುತ್ತಿರುವುದು ನಾಸಾ ಉಪಗ್ರಹ ಚಿತ್ರದಿಂದ ಕಂಡುಬರುತ್ತದೆ.

ಅಂದಾಜು 5.7 ದಶಲಕ್ಷ ಬ್ಯಾರಲ್ ಕಚ್ಚಾ ತೈಲ ಉತ್ಪಾದನೆಗೆ ಧಕ್ಕೆ ಉಂಟಾಗಿದೆ ಎಂದು ಅರಮ್ಕೊ ಹೇಳಿದೆ. ಇದು ಜಾಗತಿಕ ತೈಲ ಪೂರೈಕೆಯ ಶೇಕಡ 6ರಷ್ಟು ಹಾಗೂ ಸೌದಿ ಅರೇಬಿಯಾದ ಉತ್ಪಾದನೆಯ ಅರ್ಧದಷ್ಟಾಗಿದೆ. ಈ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಕ್ಷಿಪ್ರವಾಗಿ ಏರಿಕೆಯಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News