ಸೌದಿ ತೈಲ ಪೂರೈಕೆ ಪ್ರಮಾಣ ಮತ್ತೆ ಹಿಂದಿನ ಮಟ್ಟಕ್ಕೆ: ಸೌದಿ ಇಂಧನ ಸಚಿವ ಘೋಷಣೆ

Update: 2019-10-04 17:45 GMT

ಮಾಸ್ಕೋ, ಅ. 4: ಸೌದಿ ಅರೇಬಿಯದ ಸರಕಾರಿ ಒಡೆತನದ ಅರಾಮ್ಕೋ ಸಂಸ್ಥೆಗೆ ಸೇರಿದ ತೈಲ ಸ್ಥಾವರಗಳ ಮೇಲೆ ಕಳೆದ ತಿಂಗಳು ನಡೆದ ದಾಳಿಯ ಬಳಿಕ, ದೇಶದ ತೈಲ ಪೂರೈಕೆಯನ್ನು ಸಂಪೂರ್ಣವಾಗಿ ಹಿಂದಿನ ಮಟ್ಟಕ್ಕೆ ತರಲಾಗಿದೆ ಎಂದು ಇಂಧನ ಸಚಿವ ರಾಜಕುಮಾರ ಅಬ್ದುಲಝೀಝ್ ಬಿನ್ ಸಲ್ಮಾನ್ ಗುರುವಾರ ಹೇಳಿದ್ದಾರೆ.

ಸೌದಿ ಅರೇಬಿಯದ ಕಚ್ಚಾ ತೈಲ ಉತ್ಪಾದನಾ ಸಾಮರ್ಥ್ಯ ಈಗ ದಿನಕ್ಕೆ 1.13 ಕೋಟಿ ಬ್ಯಾರೆಲ್ ಆಗಿದೆ ಎಂದು ಅವರು ತಿಳಿಸಿದರು. ದಾಳಿಯ ಬಳಿಕ ಸೌದಿ ಅರೇಬಿಯದ ತೈಲ ಉತ್ಪಾದನೆ ಪ್ರಮಾಣವು ಅರ್ಧಕ್ಕೆ ಇಳಿದಿತ್ತು.

‘‘ದಾಳಿಯು ವಿಶ್ವಾಸಾರ್ಹ, ಸುಭದ್ರ ಮತ್ತು ಅವಲಂಬಿಸಬಹುದಾದ ತೈಲ ಪೂರೈಕೆದಾರ ಎಂಬ ಸೌದಿ ಅರೇಬಿಯದ ಪ್ರತಿಷ್ಠೆಯನ್ನು ಹಾಳುಗೆಡವಲು ನಡೆಸಲಾದ ಪ್ರಯತ್ನವಾಗಿತ್ತು’’ ಎಂದು ಸಚಿವರು ಹೇಳಿದರು.

‘‘ಈ ಸವಾಲನ್ನು ನಾವು ಸ್ವೀಕರಿಸಿ ಜಯಿಸಿದ್ದೇವೆ’’ ಎಂದು ಮಾಸ್ಕೋ ಇಂಧನ ಸಮ್ಮೇಳನದಲ್ಲಿ ಮಾತನಾಡಿದ ಅವರು ಹೇಳಿದರು.

ಸೆಪ್ಟಂಬರ್ 14ರಂದು ಅಬ್‌ಖಾಯಿಕ್ ಮತ್ತು ಖುರೈಸ್ ತೈಲ ಸ್ಥಾವರಗಳ ಮೇಲೆ ದಾಳಿ ನಡೆಸಲಾಗಿತ್ತು. ದಾಳಿಯ ಬಳಿಕ, ತೈಲ ಉತ್ಪಾದನೆಯಲ್ಲಿ ಕಡಿತವಾಗಿತ್ತು ಹಾಗೂ ತೈಲ ಬೆಲೆಯಲ್ಲಿ ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News