‘ದೇಶದಲ್ಲಿ ಸುನಾಮಿ ಬರುತ್ತಿದೆ’: ಕುವೈತ್ ನಲ್ಲಿ ಮೋದಿಯನ್ನು ಹಾಡಿಹೊಗಳಿದ ಅಣ್ಣಾಮಲೈ

Update: 2019-10-06 15:28 GMT

ಕುವೈತ್, ಅ.6: "ನಮ್ಮ ದೇಶವಾದ ಭಾರತದಲ್ಲಿ ಸುನಾಮಿ ಬರುತ್ತಿದೆ. ಇಡೀ ದೇಶವೇ ವೇಗವಾಗಿ ಬದಲಾಗುತ್ತಿದೆ. ದೇಶದಲ್ಲಿ ಸನ್ಮಾನ್ಯ ಪ್ರಧಾನಿ ಮೋದಿಯವರಿದ್ದಾರೆ. ಕೆಲವೊಂದು ಬದಲಾವಣೆಗಳ ಕಾರಣ ದೇಶದ ಕೆಲ ಮೂಲಭೂತ ತತ್ವಗಳು ಬದಲಾಗುತ್ತಿದೆ. ಕೆಲವು ಸಾಮ್ರಾಜ್ಯಗಳು ಬರುವಾಗ ದೇಶದ ಮೂಲಭೂತ ತತ್ವಗಳು ಬದಲಾಗುತ್ತವೆ. ಚಕ್ರವರ್ತಿ ಅಶೋಕ ಬರುವಾಗ, ಚಂದ್ರಗುಪ್ತ ಮೌರ್ಯ, ಬಾಬರ್, ಅಕ್ಬರ್ ಇರುವಾಗ ಇದೇ ರೀತಿಯ ಬದಲಾವಣೆಗಳಾಗಿತ್ತು” ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.

ಕುವೈತ್ ನಲ್ಲಿ ಭಾರತೀಯ ಪ್ರವಾಸಿ ಪರಿಷದ್ ಹಮ್ಮಿಕೊಂಡಿದ್ದ ‘ಕರುನಾಡ ಡಿಂಡಿಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಭಾರತದಲ್ಲೇ ಭಾರತೀಯನಾಗಿರುವುದು ಮತ್ತು ವಿದೇಶದಲ್ಲಿ ಭಾರತೀಯನಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಾವು ಇಂದು ಭರತ್ ಶೆಟ್ಟಿ ಮತ್ತು ಮಂಜುನಾಥ್ ಕೋಟ್ಯಾನ್ ರಂತಹ ಹೆಮ್ಮೆಯ ರಾಜಕಾರಣಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಏಕೆಂದರೆ ಇವರು ಹೊಸ ಮಾದರಿಯ ರಾಜಕಾರಣಿಗಳು. ಇವರು ನಾಯಕರಲ್ಲ ಬದಲಾಗಿ, ಸೇವಕರು. ಹೊಸ ರಾಜಕೀಯವನ್ನು ಪ್ರತಿನಿಧಿಸುವ ಇಬ್ಬರೂ ಇಲ್ಲಿದ್ದಾರೆ” ಎಂದು ಅಣ್ಣಾಮಲೈ ಹೇಳಿದರು.

ಇದೇ ಸಂದರ್ಭ ಮಾತನಾಡಿದ ಅವರು, "ನಮ್ಮ ಪಾಸ್ ಪೋರ್ಟನ್ನು ವಿದೇಶಗಳ ಇಮಿಗ್ರೇಶನ್ ನವರು ನೋಡಿ ನಮ್ಮನ್ನು ಗುರುತಿಸುವ ರೀತಿ ಬದಲಾಗಿದೆ. ಒಂದೆರಡು ವರ್ಷಗಳಿಂದೀಚೆಗೆ ನಮ್ಮ ದೇಶದ ಪಾಸ್ ಪೋರ್ಟನ್ನು ತೋರಿಸಿದಾಗ ಯುರೋಪ್ ಮತ್ತು ಇತರ ದೇಶಗಳಲ್ಲಿ ನಮ್ಮನ್ನು ನೋಡುವ ರೀತಿ ಬದಲಾಗಿದೆ. ನಮ್ಮ ದೇಶದ ಪ್ರಧಾನಿ ಎಲ್ಲಿಯೇ ಹೋದರೂ ಅನಿವಾಸಿಗಳಿಗೆ ಮೊದಲ ಗೌರವ ನೀಡುತ್ತಾರೆ. ನಿಮ್ಮ ಶಕ್ತಿ ಹೆಚ್ಚಾಗಬೇಕೆಂಬುದು ಅವರ ಆಸೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ಹ್ಯೂಸ್ಟನ್ ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮ. ಡೊನಾಲ್ಡ್ ಟ್ರಂಪ್ ಅವರು ಅವರ ಜೀವನದಲ್ಲೇ 10 ಸಾವಿರಕ್ಕೂ ಅಧಿಕ ಜನರನ್ನು ನೋಡಿರಲು ಸಾಧ್ಯವಿಲ್ಲ. ಅಮೆರಿಕದಲ್ಲಿ ಒಬ್ಬ ರಾಜಕಾರಣಿ ರಾಜಕೀಯ ಕಾರ್ಯಕ್ರಮದಲ್ಲಿ ಮಾತನಾಡುವುದಾದರೆ 10 ಸಾವಿರ ಜನರು ಬರುತ್ತಾರೆ. ಮೋದಿಯವರು 25 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದಾಗ ಶ್ವೇತಭವನದ ಮುಂಭಾಗ ನಿಂತು ಫೋಟೊ ತೆಗೆದದ್ದನ್ನು ನೀವು ನೋಡಿರಬಹುದು. ಈ ಬಾರಿ ಅವರು ಟೆಕ್ಸಾಸ್ ಗೆ ಹೋದಾಗ ಹ್ಯೂಸ್ಟನ್ ನಲ್ಲಿ 59 ಸಾವಿರ ಜನ ಬಂದಿದ್ದಾರೆ. ನಾವು ಅಮೆರಿಕ ಅಧ್ಯಕ್ಷರನ್ನು ಹುಡುಕಿಕೊಂಡು ಹೋಗುತ್ತೇವೆ. ಅಪಾಯಿಂಟ್ ಮೆಂಟ್ ತೆಗೆದು ನಮಗೆ ಕೇವಲ 15 ನಿಮಿಷ ಸಮಯ ಸಿಗುತ್ತವೆ. ಆದರೆ ಸ್ವತಃ ಅಧ್ಯಕ್ಷರೇ ಹುಡುಕಿಕೊಂಡು ಬಂದು ಎರಡೂವರೆ ಗಂಟೆ ವೇದಿಕೆಯ ಕೆಳಗೆ ಕುಳಿತುಕೊಂಡಿದ್ದಾರೆ. ಯಾವ ದೇಶದ ನಾಯಕರಿಗೂ ಅಮೆರಿಕದಲ್ಲಿ ಈ ತರಹ ಗೌರವ ಸಿಕ್ಕಿರಲಿಲ್ಲ. ಅದು ಮೋದಿಯವರಿಗೆ ಸಿಕ್ಕ ಮರ್ಯಾದೆ ಎಂದು ನಾವು ಹೇಳಬಹುದು, ಆದರೆ ಪರೋಕ್ಷವಾಗಿ ಅನಿವಾಸಿ ಭಾರತೀಯರಿಗೆ ಸಿಕ್ಕ ಅದು. ನಾಳೆ ವಿಶ್ವಾದ್ಯಂತ ಆರ್ಥಿಕ ಆಘಾತ ಎದುರಾದರೂ ಭಾರತ ಅದನ್ನು ನಿಭಾಯಿಸಲು ಶಕ್ತವಾಗಿದೆ” ಎಂದವರು ಹೇಳಿದರು.

“ನಮ್ಮಲ್ಲಿ 2 ರೀತಿಯ ಜನರು ಊರು ಬಿಡುತ್ತಾರೆ. ಮೊದಲನೆಯವ ಕಳ್ಳ. ಆದ್ದರಿಂದ ಆ ವಿಭಾಗದ ಬಗ್ಗೆ ಹೆಚ್ಚಿನ ಮಾತುಗಳು ಬೇಡ. 2ನೆ ವಿಭಾಗದ ಊರು ಬಿಡುವವರು ತಾಕತ್ತಿದ್ದವರು. ಅವರಿಗೆ ಧೈರ್ಯ ಮತ್ತು ಗುರಿ ಇರಬೇಕು. ಇವರಿಗೆ ನಮ್ಮ ಊರಿನಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕದಾದ ಕೆಲಸ ಸಿಗುತ್ತಿಲ್ಲ, ನಮ್ಮ ಸಾಮರ್ಥ್ಯ ಹೆಚ್ಚಿದೆ ಎನ್ನುವುದು ಗೊತ್ತಿರುತ್ತದೆ. ಆದ್ದರಿಂದ ಬೇರೆ ದೇಶಗಳಿಗೆ ತೆರಳಿ ಅವರ ಗುರಿಯನ್ನು ಮುಟ್ಟುತ್ತಾರೆ. ಆದ್ದರಿಂದ ನೀವೆಲ್ಲಾ (ಅನಿವಾಸಿ ಭಾರತೀಯರು) ಧೈರ್ಯಶಾಲಿಗಳು. ಇನ್ನು 10-15 ವರ್ಷಗಳಲ್ಲಿ ನಮ್ಮ ದೇಶ ಬದಲಾಗುತ್ತದೆ. ಭಾರತದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನಿಮಗೆಲ್ಲರಿಗೂ ಇಲ್ಲಿ ಸಿಗುವ ಅವಕಾಶಗಳಿಗಿಂತ ಹೆಚ್ಚಿನ ಅವಕಾಶಗಳು ಇನ್ನು ಕೆಲ ವರ್ಷಗಳಲ್ಲಿ ನಿಮಗೆ ಭಾರತದಲ್ಲಿ ಸಿಗಬಹುದು. ನೀವು ಭಾರತಕ್ಕೆ ಹಿಂದಿರುಗಲೂಬಹುದು. ಆದ್ದರಿಂದಲೇ ನಾನು ಮೂಲಭೂತ ತತ್ವಗಳು ಬದಲಾಗುತ್ತಿದೆ. ಸುನಾಮಿ ಬರುತ್ತಿದೆ ಎಂದು ಮೊದಲೇ ಹೇಳಿದ್ದೆ. 5 ವರ್ಷಗಳಲ್ಲಿ 50 ವರ್ಷಗಳ ವೇಗದಲ್ಲಿ ದೇಶ ಬೆಳೆಯುತ್ತಿದೆ” ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News