ಯುಎಇಯಲ್ಲಿ ನರ್ಸ್ ಹುದ್ದೆಗೆ ಹೊಸ ಅರ್ಹತೆ

Update: 2019-10-15 18:00 GMT

ದುಬೈ, ಅ. 15: ಯುಎಇಯಲ್ಲಿ ನರ್ಸ್‌ಗಳಿಗೆ ಹೊಸ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಡಿಪ್ಲೊಮಾ ಪ್ರಮಾಣಪತ್ರಗಳನ್ನು ಹೊಂದಿರುವ ನೂರಾರು ಭಾರತೀಯ ನರ್ಸ್‌ಗಳು ಕೆಲಸ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ಸೋಮವಾರ ವರದಿ ಮಾಡಿದೆ.

ನರ್ಸ್‌ಗಳು ನರ್ಸಿಂಗ್‌ನಲ್ಲಿ ಬ್ಯಾಚಲರ್ಸ್‌ ಪದವಿಯನ್ನು ಹೊಂದುವುದು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನಾಗಿ ಯುಎಇ ಮಾಡಿದೆ.

ಈ ಹಿನ್ನೆಲೆಯಲ್ಲಿ, ಈಗಾಗಲೇ 200ಕ್ಕೂ ಅಧಿಕ ನರ್ಸ್‌ಗಳು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ ಹಾಗೂ ಹಲವಾರು ಮಂದಿಗೆ ಹಿಂಭಡ್ತಿ ನೀಡಲಾಗಿದೆ ಎಂದು ಪತ್ರಿಕೆ ಹೇಳಿದೆ.

ಡಿಪ್ಲೊಮಾ ಸರ್ಟಿಫಿಕೇಟ್‌ಗಳನ್ನು ಹೊಂದಿರುವ ನರ್ಸ್‌ಗಳು ಸೇವೆಯಲ್ಲಿ ಮುಂದುವರಿಯಲು ಬಯಸಿದರೆ, ಅವರು ಯುಎಇಯಲ್ಲಿ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ‘ಪೋಸ್ಟ್ ಬೇಸಿಕ್ ಬಿ.ಎಸ್‌ಸಿ. ನರ್ಸಿಂಗ್ ಪ್ರೋಗ್ರಾಮ್’ನ್ನು 2020ರ ಒಳಗೆ ಮಾಡಬೇಕಾಗಿದೆ.

ಆದರೆ, ನರ್ಸಿಂಗ್ ಪದವಿ ಪಡೆಯಲು ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿರುವ ನರ್ಸ್‌ಗಳು ಹೊಸದೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಮ್ಮ ಡಿಪ್ಲೊಮಾ ಸರ್ಟಿಫಿಕೇಟ್‌ಗಳಿಗೆ ತತ್ಸಮಾನ ಸರ್ಟಿಫಿಕೇಟ್‌ಗಳನ್ನು ಕೋರಿ ಅವರು ಸಲ್ಲಿಸಿರುವ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News