ದುಬೈ: ಕೆಎಸ್ಸಿಸಿ ಟಾಲೆರೆನ್ಸ್ ಟ್ರೋಫಿ ವಾಲಿಬಾಲ್ ಪಂದ್ಯಾಟದ ಪೂರ್ವಭಾವಿ ಸಭೆ

Update: 2019-10-20 18:05 GMT

ದುಬೈ: ಕೆಎಸ್‌ಸಿಸಿ ಟಾಲರೆನ್ಸ್ ಟ್ರೋಫಿ - ವಾಲಿಬಾಲ್ ಪಂದ್ಯಾವಳಿ ಅಕ್ಟೋಬರ್ 25 ರಂದು ದುಬೈನ ಅಲ್ ವಾಸ್ಲ್ ಕ್ಲಬ್‌ನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಪಂದ್ಯಾಕೂಟದ ಸಂಘಟನಾ ಸಮಿತಿ ರಚನೆ ಮತ್ತು ಭಾಗವಹಿಸುವ ತಂಡಗಳೊಂದಿಗೆ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿ ದುಬೈ ಪರ್ಲ್ ಕ್ರೀಕ್ ಹೋಟೆಲ್‌ನಲ್ಲಿ ಶನಿವಾರ ನಡೆಯಿತು.

ಯುಎಈ ಆಚರಿಸುತ್ತಿರುವ 'ಸಹಿಷ್ಣುತಾ ವರ್ಷ 2019' ಅಂಗವಾಗಿ ಕೆಎಸ್‌ಸಿಸಿ(ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್) ಆಯೋಜಿಸುತ್ತಿರುವ ಪಂದ್ಯಾಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಹಫೀಝುದ್ದೀನ್ ಕಾಪು ವಹಿಸಿದ್ದರು. ಕೆಎಸ್‌ಸಿಸಿ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಅವರು ಮುನ್ನುಡಿ ಭಾಷಣ ಮಾಡಿದರು ಮತ್ತು ಚರ್ಚೆಯ ಕಾರ್ಯಸೂಚಿಗಳನ್ನು ಸಮಿತಿಯ ಉಪಾಧ್ಯಕ್ಷ ಹಫೀಝುದ್ದೀನ್ ಕಾಪು ವಿವರಿಸಿದರು.

ಸಭೆಯ ನಂತರ ಪತ್ರಿಕಾಗೋಷ್ಠಿ, ಜರ್ಸಿ ಬಿಡುಗಡೆ ಹಾಗೂ ಕಾರ್ಯಕ್ರಮದ ವೇಳಾಪಟ್ಟಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಲ್ಲಾ ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಮ್ ಸ್ಕ್ವೇರ್ ಇಂಜಿನಿಯರಿಂಗ್ ಕನ್ಸಲ್ಟೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪಂದ್ಯಾಕೂಟದ ಮುಖ್ಯ ಪ್ರಾಯೋಜಕ ಮುಹಮ್ಮದ್ ಮುಸ್ತಫಾ ಮತ್ತು ಕ್ಲಬ್‌ನ BOD ಸದಸ್ಯರಾದ ಖಲೀದ್ ಅಲ್ಮ್‌ಹೇರಿ ಅವರು ಅತಿಥಿಯಾಗಿ ಭಾಗವಹಿಸಿದ್ದರು.

ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಅಫ್ರೋಜ್ ಅಸ್ಸಾದಿ, ಉಪಾಧ್ಯಕ್ಷರಾಗಿ ಹಫೀಝುದ್ದೀನ್, ಸದಸ್ಯರಾಗಿ ನೋಯೆಲ್ ಅಲ್ಮೇಡ, ಅಲ್ತಾಫ್ ಖಲೀಫಾ, ಮುಬೀನ್ ಉಡುಪಿ, ಸಮಿಯುಲ್ಲಾ, ಮಜೀದ್, ನಸೀರ್, ಅಬ್ದುಲ್ ಹಮೀದ್, ಮುಹಮ್ಮದ್ ಶಫಿ, ತನ್ವೀರ್ ಮತ್ತು ಅಲ್ತಾಫ್ ಕುದ್ರೋಳಿ ನೇಮಕಗೊಂಡರು.

ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾದ ಮ್ಯಾಚ್ ರೆಫರಿ ಮುಹಿದ್ದೀನ್ ಪಂದ್ಯಾಕೂಟದ ನಿಯಮಗಳನ್ನು ಬಿಡುಗಡೆ ಮಾಡಿದರು. ನಂತರ ಪಂದ್ಯಾಕೂಟದ ವೇಳಾಪಟ್ಟಿ ಮತ್ತು ಭಾಗವಹಿಸುವ 8 ತಂಡಗಳ ಜರ್ಸಿಗಳನ್ನು ಬಿಡುಗಡೆ ಮಾಡಲಾಯಿತು. ಕೆಎಸ್ಸಿಸಿ ಸಂಸ್ಥೆಯ ಉಪಾಧ್ಯಕ್ಷ  ಹಫೀಜುದ್ದೀನ್ ಕಾಪು ಮತ್ತು ಮುಖ್ಯ ಅತಿಥಿ ಮುಹಮ್ಮದ್ ಮುಸ್ತಫಾ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸುವ ಮೂಲಕ ಜರ್ಸಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಶ್ರೀ ಜಿಯಾವುದ್ದೀನ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News