ಸ್ಟಾರ್ಟಪ್ ಕಂಪೆನಿಗಳಿಗೆ ಬಂಡವಾಳ ಹೂಡಿಕೆಗೆ ವೇದಿಕೆ ಒದಗಿಸಲಿದೆ ಬಿಸಿಸಿಐ ಯುಎಈ ಘಟಕ !

Update: 2019-10-30 17:19 GMT

ದುಬೈ, ಅ.30: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಯುಎಈ ಘಟಕ ಉದ್ಯಮ ಕ್ಷೇತ್ರಕ್ಕೆ ಇಳಿಯುವ ಯುವ ಉದ್ಯಮಿಗಳ ಅರ್ಹ ಸ್ಟಾರ್ಟಪ್ ಕಂಪೆನಿ ಅಥವಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ (ಎಸ್‌ಎಂಇ) ಬಂಡವಾಳ ಹೂಡಿಕೆಯ ವೇದಿಕೆ ಒದಗಿಸಲು ಉದ್ದೇಶಿಸಿದೆ ಎಂದು ಘಟಕದ ಅಧ್ಯಕ್ಷ ಎಸ್.ಎಂ.ಬಶೀರ್ ತಿಳಿಸಿದ್ದಾರೆ.

ದುಬೈನ ಅಲ್-ಬರ್ಷಾದಲ್ಲಿರುವ ಹಾಲಿಡೇ ಇನ್ ಹೋಟೇಲ್‌ನಲ್ಲಿ ನಡೆದ ಬಿಸಿಸಿಐ ಯುಎ ಘಟಕದ ಕಾರ್ಯಕಾರಿಣಿ ಸಮಿತಿಯ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು.

ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಪ್ರತಿಭೆಗಳ ಕೆಲ ಅತ್ಯುತ್ತಮ ಸ್ಟಾರ್ಟಪ್ ಕಂಪೆನಿಗಳು ಸಣ್ಣ ಬಂಡವಾಳದೊಂದಿಗೆ ಉನ್ನತ ಮಟ್ಟಕ್ಕೇರಿ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿವೆ. ಆದರೆ ಅದೆಷ್ಟೋ ಯುವ ಪ್ರತಿಭೆಗಳ ಬಳಿ ಯೋಜನೆಗಳಿದ್ದರೂ ಪ್ರಾರಂಭಿಕ ಬಂಡವಾಳ ಹೂಡುವವರಿಲ್ಲದೆ ಅವಕಾಶವಂಚಿತರಾಗಿದ್ದಾರೆ. ಅಂತಹ ಕೆಲವು ಅರ್ಹ ಸ್ಟಾರ್ಟಪ್ ಕಂಪೆನಿ ಅಥವಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಯೋಜನೆಗೆ ಅನಿವಾಸಿ ಭಾರತೀಯರಿಂದ ಬಂಡವಾಳ ಹೂಡಿಕೆ ಮಾಡುವ ವೇದಿಕೆ ಒದಗಿಲು ಬಿಸಿಸಿಐ ಯುಎಈ ಘಟಕ ನಿಧರಿರ್ಸಿದೆ ಎಂದು ಅವರು ವಿವರಿಸಿದರು.

ಯುಎಈ ಘಟಕದ ಉಪಾಧ್ಯಕ್ಷ ಅಬ್ದುಲ್ಲಾ ಮದುಮೂಲೆ ಮಾತನಾಡಿ, ಆಸಕ್ತ ಯುವ ಪ್ರತಿಭೆಗಳು ತಮ್ಮ ವೈಯಕ್ತಿಕ ವಿವರಗಳನ್ನು ಹಾಗೂ ಸ್ಟಾರ್ಟಪ್ ಯೋಜನೆಗೆ ನೀಡಿರುವ ಹೆಸರಿನೊಂದಿಗೆ admin@bcciuae.comಗೆ ನವೆಂಬರ್ 30ರೊಳಗೆ ನೋಂದಾಯಿಸಬೇಕು. ಬಿಸಿಸಿಐ ಯುಎಈ ಸಮಿತಿಯು ಆಯ್ದ ಪ್ರತಿಭೆಗಳಿಗೆ ದುಬೈನಲ್ಲಿ ಬಿಸಿಸಿಐ ವತಿಯಿಂದ ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಂಡವಾಳಗಾರರೊಂದಿಗೆ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಬ್ದುರ್ರವೂಫ್, ಹಂಝ ಅಬ್ದುಲ್ ಖಾದರ್, ಮುಹಮ್ಮದ್ ಅಲಿ ಉಚ್ಚಿಲ್, ನವೀದ್ ಮಾಗುಂಡಿ, ಬಶೀರ್ ಕಿನ್ನಿಂಗಾರ್, ಇಮ್ರಾನ್ ಖಾನ್ ಎರ್ಮಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News