ರೈಲು ಪ್ಲಾಟ್‌ ಫಾರಂಗಳಲ್ಲಿ ಚಹಾ ಮಾರುತ್ತಾ ಇಲ್ಲಿವರೆಗೆ ಬಂದೆ: ಸೌದಿ ಅರೇಬಿಯದಲ್ಲಿ ಪ್ರಧಾನಿ ನರೇಂದ್ರ ಮೋದಿ

Update: 2019-10-30 17:46 GMT

ರಿಯಾದ್ (ಸೌದಿ ಅರೇಬಿಯ), ಅ. 30: “ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ, ಕಡು ಬಡತನದ ಹಿನ್ನೆಲೆಯನ್ನು ಹೊಂದಿದವನು ನಾನು. ರೈಲ್ವೇ ಪ್ಲಾಟ್‌ಫಾರಂನಲ್ಲಿ ಚಹಾ ಮಾರಿದ್ದು ನನ್ನ ಬದುಕಿನ ಪ್ರಯಾಣದ ಒಂದು ಭಾಗ” ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸೌದಿ ಅರೇಬಿಯದಲ್ಲಿ ಹೇಳಿದ್ದಾರೆ.

 ‘‘ಯಾವುದೇ ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆ ನನಗಿಲ್ಲ. ನಾನು ಪುಸ್ತಕಗಳಿಂದ ಬಡತನದ ಬಗ್ಗೆ ತಿಳಿದವನಲ್ಲ, ನಾನು ಅದರಲ್ಲೇ ಬದುಕಿದವನು. ರೈಲ್ವೇ ಪ್ಲಾಟ್‌ಫಾರಂಗಳಲ್ಲಿ ಚಹಾ ಮಾರುತ್ತಾ ನಾನು ಇಲ್ಲಿವರೆಗೆ ತಲುಪಿದವನು’’ ಎಂದು ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನಿಶಿಯೇಟಿವ್ (ಎಫ್‌ಐಐ) ಕಾರ್ಯಕ್ರಮದ ಪ್ರಶ್ನೋತ್ತರ ಅವಧಿಯಲ್ಲಿ ಅವರು ಹೇಳಿದರು.

‘‘ಕೆಲವೇ ವರ್ಷಗಳಲ್ಲಿ ಬಡತನವನ್ನು ನಿವಾರಿಸಲು ಭಾರತಕ್ಕೆ ಸಾಧ್ಯವಾಗುತ್ತದೆ. ಬಡವರನ್ನು ಸಬಲೀಕರಣಗೊಳಿಸುತ್ತಾ ನಾನು ಬಡತನದ ವಿರುದ್ಧ ಹೋರಾಡುತ್ತೇನೆ. ಬಡವರಿಗೆ ಘನತೆಯ ಅಗತ್ಯವಿದೆ. ನನ್ನ ಬಡತನವನ್ನು ನಾನೇ ನಿವಾರಿಸುತ್ತೇನೆ ಎಂದು ಬಡವನೊಬ್ಬ ಹೇಳಿದಾಗ, ಅದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ. ನಾವು ಮಾಡಬೇಕಾಗಿರುವುದೇನೆಂದರೆ, ಅವರಿಗೆ ಘನತೆಯನ್ನು ನೀಡುವುದು ಮತ್ತು ಅವರನ್ನು ಸಬಲೀಕರಣಗೊಳಿಸುವುದು’’ ಎಂದು ಮೋದಿ ಅಭಿಪ್ರಾಯಪಟ್ಟರು.

ಶೌಚಾಲಯಗಳ ನಿರ್ಮಾಣ ಮತ್ತು ಬ್ಯಾಂಕ್ ಖಾತೆಗಳು ಭಾರತದ ಬಡವರನ್ನು ಸಬಲೀಕರಣಗೊಳಿಸಿವೆ ಹಾಗೂ ಅವರಿಗೆ ಘನತೆಯ ಭಾವವನ್ನು ಒದಗಿಸಿವೆ ಎಂದರು.

‘‘ಭಾರತದಲ್ಲಿ ಬದಲಾವಣೆಯಾದಾಗ, ಇಡೀ ಜಗತ್ತಿನ ಅಂಕಿಸಂಖ್ಯೆಗಳು ಬದಲಾಗುತ್ತವೆ’’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಸೌದಿ ಅರೇಬಿಯ ಪ್ರವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News