ಮುಚ್ಚುಗಡೆಯ ನಿರ್ಧಾರ ಹಿಂಪಡೆದ ಕತರ್ ನ ಭಾರತೀಯ ಶಾಲೆ: ವಿದ್ಯಾರ್ಥಿಗಳು, ಪೋಷಕರು ನಿರಾಳ

Update: 2019-10-31 17:20 GMT

ಕತರ್, ಅ.31: 'ಪ್ರಸಕ್ತ ಶೈಕ್ಷಣಿಕ ವರ್ಷ (2019-2020) ಶಾಲೆಯ ಕೊನೆಯ ವರ್ಷವಾಗಲಿದೆ ಹಾಗೂ ಹೆತ್ತವರು ಮುಂದಿನ ಶೈಕ್ಷಣಿಕ ವರ್ಷಕ್ಕೆ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು' ಎಂದು ಪೋಷಕರಿಗೆ ಸಂದೇಶ ಕಳುಹಿಸಿದ್ದ ಕತರ್ ನ ದೋಹಾ ಮಾಡರ್ನ್ ಇಂಡಿಯನ್ ಸ್ಕೂಲ್ ತನ್ನ ಸಂದೇಶವನ್ನು ಹಿಂದೆಗೆದುಕೊಂಡಿರುವುದಾಗಿ ಹೇಳಿದ್ದು, ವಿದ್ಯಾರ್ಥಿಗಳು ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಕತರ್ ನಲ್ಲಿರುವ ದೋಹಾ ಮಾಡರ್ನ್ ಇಂಡಿಯನ್ ಸ್ಕೂಲ್ ಬುಧವಾರ ತನ್ನೆಲ್ಲಾ ವಿದ್ಯಾರ್ಥಿಗಳ ಹೆತ್ತವರಿಗೆ ಸಂದೇಶ ಕಳುಹಿಸಿ ಶಾಲೆಯ ಮುಚ್ಚುತ್ತಿರುವುದಾಗಿ ತಿಳಿಸಿತ್ತು. ಇದರಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಕಂಗಾಲಾಗಿದ್ದರು. ಈ ಶಾಲೆಯಲ್ಲಿ ಕಲಿಯುತ್ತಿರುವ 2,400ಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ ಸುಮಾರು 300 ವಿದ್ಯಾರ್ಥಿಗಳು ಕರ್ನಾಟಕದವರು.

ಕತರ್‍ ನಲ್ಲಿ ಭಾರತೀಯ ಶಾಲೆಗಳ ಕೊರತೆಯಿರುವುದರಿಂದ ಅಲ್ಲಿರುವ ಶಾಲೆಗಳಲ್ಲಿ ದೋಹಾ ಮಾಡರ್ನ್ ಶಾಲೆಯ 2,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೇಗೆ ಪ್ರವೇಶ ದೊರಕಬಹುದು ಎಂಬ ಕುರಿತಂತೆ ಹೆತ್ತವರು ಚಿಂತಿತರಾಗಿದ್ದರು.

ಆದರೆ ಇದೀಗ ಶಾಲೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿ ಸಮಸ್ಯೆ ಇತ್ಯರ್ಥಗೊಂಡಿದ್ದು, ಶಾಲೆಯು ಮುಚ್ಚುಗಡೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News