ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಸೌದಿಯ ಪ್ರಥಮ ಮಹಿಳೆ

Update: 2019-11-23 17:16 GMT
ಫೋಟೊ: facebook.com/reemajuffaliracing/

ದಿರಿಯಾ (ಸೌದಿ ಅರೇಬಿಯ), ನ. 23: ಪುರುಷ ಪ್ರಾಬಲ್ಯದ ಕಾರು ರೇಸಿಂಗ್ ಕ್ಷೇತ್ರಕ್ಕೆ ಸೌದಿ ಅರೇಬಿಯದ ಮಹಿಳೆಯೊಬ್ಬರು ಕಾಲಿಡುತ್ತಿದ್ದಾರೆ. ಇಲೆಕ್ಟ್ರಿಕ್ ಎಸ್‌ಯುವಿ ಚಲಾಯಿಸುತ್ತಿರುವ ರೀಮಾ ಜುಫಾಲಿ ಈ ಕ್ಷೇತ್ರದಲ್ಲಿ ಅದೃಷ್ಟ ಅರಸಿಕೊಂಡು ಬಂದಿರುವ ಸೌದಿ ಅರೇಬಿಯದ ಮೊದಲ ಮಹಿಳೆಯಾಗಿದ್ದಾರೆ.

ಸೌದಿ ಅರೇಬಿಯದಲ್ಲಿ ಇಂಥ ಒಂದು ಚಟುವಟಿಕೆಯನ್ನು ಕಳೆದ ವರ್ಷದ ಜೂನ್‌ವರೆಗೆ ಊಹಿಸಲೂ ಸಾಧ್ಯವಿರಲಿಲ್ಲ. 2018 ಜೂನ್‌ನಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ನೀಡಲಾಯಿತು ಹಾಗೂ ಚಾಲನಾ ಪರವಾನಿಗೆಗಳನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಅಲ್ಲಿಯವರೆಗೆ ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿತ್ತು.

ಮಹಿಳೆಯರ ವಿರುದ್ಧದ ವಾಹನ ಚಾಲನೆ ನಿಷೇಧ ಕೊನೆಗೊಂಡ ಬಳಿಕವಷ್ಟೇ ವಾಹನ ಚಾಲನೆ ಕ್ಷೇತ್ರಕ್ಕೆ ಇಳಿದ 27 ವರ್ಷದ ಜುಫಾಲಿ ವಾರಾಂತ್ಯದಲ್ಲಿ ರಾಜಧಾನಿ ರಿಯಾದ್‌ಗೆ ಸಮೀಪದ ದಿರಿಯಾದಲ್ಲಿ ನಡೆಯುತ್ತಿರುವ ಜಾಗ್ವಾರ್ ಐ-ಪೇಸ್ ಇ-ಟ್ರೋಫಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಇಲೆಕ್ಟ್ರಿಕ್ ವಾಹನಗಳ ಸ್ಪರ್ಧೆಯಾಗಿದೆ.

‘‘ಮಹಿಳೆಯರ ವಾಹನ ಚಾಲನೆ ಮೇಲಿನ ನಿಷೇಧವನ್ನು ಕಳೆದ ವರ್ಷ ತೆರವುಗೊಳಿಸಲಾಗಿದೆ. ನಾನು ವೃತ್ತಿಪರ ರೇಸ್‌ನಲ್ಲಿ ಭಾಗವಹಿಸುತ್ತೇನೆಂದು ಆಗ ಕನಸಿನಲ್ಲೂ ಊಹಿಸಿರಲಿಲ್ಲ. ಈಗ ನಾನು ಆ ಹಂತಕ್ಕೆ ಬಂದಿರುವುದನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ’’ ಎಂದು ಎಎಫ್‌ಪಿಗೆ ನೀಡಿದ ಸಂದರ್ಶನವೊಂದರಲ್ಲಿ ಜುಫಾಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News