ದುಬೈ: ಕೆಎಸ್ ಸಿಸಿ ಫಿಟ್ನೆಸ್ ಚಾಲೆಂಜ್ ಅಭಿಯಾನ ಸಮಾರೋಪ

Update: 2019-12-02 12:11 GMT

ದುಬೈ, ಡಿ.2: ದುಬೈ ಫಿಟ್ನೆಸ್ ಚಾಲೆಂಜ್ 30 ದಿನಗಳ ಅಭಿಯಾನದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಕ್ಲಬ್ (ಕೆಎಸ್ ಸಿಸಿ) ನವೆಂಬರ್ 29ರಂದು ಅಲ್ ಮಂಮ್ಝಾರ್ ಪಾರ್ಕಿನಲ್ಲಿ  ಆಯೋಜಿಸಿದ್ದ 'ಫಿಟ್ನೆಸ್ ಆಕ್ಟಿವಿಟೀಸ್ ಪ್ರೋಗ್ರಾಮ್' ಅದ್ದೂರಿಯಿಂದ ನಡೆಯಿತು.

ಕೆಎಸ್'ಸಿಸಿ ಸದಸ್ಯರು ಯುಎಈ ಧ್ವಜವೇ ಮೇಲ್ನೋಟಕ್ಕೆ ಕಾಣುವ ರೀತಿಯಲ್ಲಿ ಮಾನವ ಧ್ವಜವನ್ನು ರಚಿಸಿ 'ಫಿಟ್ನೆಸ್ ಆಕ್ಟಿವಿಟೀಸ್' ಕಾರ್ಯಕ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದರು.

ಯುಎಈ ಧ್ವಜದ ಬಣ್ಣದ ಬಲೂನ್ ಹಾರಿಬಿಡುವ ಮೂಲಕ ಎಂಸ್ಕ್ವೇರ್ ಸಂಸ್ಥೆಯ ಮಾಲಕ ಮುಹಮ್ಮದ್ ಮುಸ್ತಫಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿ ಶುಭ ಹಾರೈಸಿದರು.

ಮಂಮ್ಝಾರ್ ಪಾರ್ಕಿನಲ್ಲಿ ಕೆಎಸ್'ಸಿಸಿಯ ವೇದಿಕೆಯಲ್ಲಿ ಕರಾಟೆ ಪಟುಗಳಾದ ಅಯಾನ್, ಅದಾನ್, ಅಫಾನ್ ಅವರಿಂದ ಮಾರ್ಷಲ್ ಆರ್ಟ್ಸ್ ಪ್ರದರ್ಶನ  ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ದುಬೈ ಪೊಲೀಸ್ ಅಕಾಡಮಿಯ ದೈಹಿಕ ಶಿಕ್ಷಕ ಕ್ಯಾಪ್ಟನ್ ರಾದೂ ದೊವಾಗನಿಕ್ ನೇತೃತ್ವದಲ್ಲಿ ನಡೆದ ಒಂದು ಗಂಟೆಗಳ ದೈಹಿಕ ಕಸರತ್ತಿನಲ್ಲಿ ಕೆಎಸ್ ಸಿಸಿ ಸದಸ್ಯರು ಭಾಗಿಯಾದರು. ಈ ಸಂದರ್ಭ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ದೈಹಿಕ ಕಸರತ್ತು ಎಷ್ಟು ಮುಖ್ಯ ಎಂಬ ಬಗ್ಗೆ ಹಾಗೂ ಯಾವೆಲ್ಲಾ ಸುಲಭವಾದ ವ್ಯಾಯಾಮಗಳನ್ನು ದಿನನಿತ್ಯ ಮಾಡಬೇಕೆಂದು ವಿವರಿಸಿದರು.

ಅತಿಥಿಗಳಾದ ಹಫೀಝ್, ಕೆಎಸ್ ಸಿಸಿ ಉಪಾಧ್ಯಕ್ಷ ಝಿಯಾವುದ್ದೀನ್, ಮ್ಯಾನೇಜರ್ ಶಫಿ, ಕಾರ್ಯಕ್ರಮ ಆಯೋಜಕರ ತಂಡದ ನಾಸಿರ್ ಉಪಸ್ಥಿತರಿದ್ದರು. ತನ್ವೀರ್  ಕಾರ್ಯಕ್ರಮವನ್ನು ನಿರೂಪಿಸಿದರು.

ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಯುಎಈಯಲ್ಲಿರುವ ಅನಿವಾಸಿ ಭಾರತೀಯರ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಲು ದುಬೈ ಸರ್ಕಾರದ ಕಲ್ಚರಲ್ ಡೆವಲಪ್ಮೆಂಟ್ ಅಥಾರಿಟಿಯ ಅಧೀನದಲ್ಲಿ ಅಧಿಕೃತವಾಗಿ ನೊಂದಣಿ ಪಡೆದ ಕರ್ನಾಟಕದ ಏಕೈಕ ಸಂಸ್ಥೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಹಲವು ರೀತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಾ ದುಬೈ ಸರ್ಕಾರದಿಂದ ಪ್ರಶಂಸಿಸಲ್ಪಟ್ಟಿದೆ. ಕೆಎಸ್'ಸಿಸಿ ಆಯೋಜಿಸಿದ ಫಿಟ್ನೆಸ್ ಆಕ್ಟಿವಿಟೀಸ್ ಕಾರ್ಯಕ್ರಮವೂ ಕಲ್ಚರಲ್ ಡೆವಲಪ್ಮೆಂಟ್ ಅಥಾರಿಟಿ, ದುಬೈ ಸ್ಪೋರ್ಟ್ಸ್ ಕೌನ್ಸಿಲ್, ದುಬೈ ಮುನ್ಸಿಪಾಲಿಟಿ ಸಹಭಾಗಿತ್ವದಲ್ಲೇ ನಡೆದಿದೆ ಎಂದು ಪ್ರಕಟನೆ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News