ಅಜ್ಮಾನ್‌ : ತುಂಬೆ ವಿ.ವಿ. ಆಸ್ಪತ್ರೆ ಉದ್ಘಾಟನೆ

Update: 2019-12-10 17:45 GMT

ದುಬೈ : ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ತುಂಬೆ ಸಮೂಹದ ಇತ್ತೀಚೆಗಿನ ಶೈಕ್ಷಣಿಕ ಆಸ್ಪತ್ರೆ ತುಂಬೆ ವಿ.ವಿ. ಆಸ್ಪತ್ರೆಯನ್ನು ಅಜ್ಮಾನ್‌ನ ಯುವ ರಾಜ ಹಾಗೂ ಅಜ್ಮಾನ್ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಕ್ ಅಮ್ಮರ್ ಬಿನ್ ಹುಮೈದ್ ಅಲ್ ನೂಯೈಮಿ ಸೋಮವಾರ ಉದ್ಘಾಟಿಸಿದರು.

ತುಂಬೆ ಸಮೂಹ ಅಜ್ಮಾನ್‌ನಲ್ಲಿ ಒಟ್ಟು 1 ಶತಕೋಟಿ ದಿರ್ಹಂ ವೆಚ್ಚದಲ್ಲಿ ನಿರ್ಮಿಸಿದ ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಹಾಗೂ ಸಂಶೋಧನೆಯ ಪ್ರಾದೇಶಿಕ ಕೇಂದ್ರ ತುಂಬೆ ಮೆಡಿಸಿಟಿಯನ್ನು ಕೂಡ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಡಾ. ತುಂಬೆ ಮೊಯ್ದಿನ್, ಈ ವಲಯದಲ್ಲಿ ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಅಸ್ತಿತ್ವಕ್ಕೆ ತರುವ, ಅತ್ಯಾಧುನಿಕ ತಂತ್ರಜ್ಞಾನ, ಅನುಭವಿ ವೈದ್ಯರು, ಅತ್ಯುಚ್ಛ ಸೌಲಭ್ಯ ಬಳಸಿ ಜಾಗತಿಕ ಮಟ್ಟದ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಸಂಶೋಧನೆಯ ಕೇಂದ್ರವಾಗಿಸುವ ನಮ್ಮ ನಿರಂತರ ಪ್ರಯತ್ನವಾಗಿ ತುಂಬೆ ಮೆಡಿಸಿಟಿ ಅಸ್ತಿತ್ವಕ್ಕೆ ಬಂದಿದೆ ಎಂದರು.

ತುಂಬೆ ವಿ.ವಿ. ಆಸ್ಪತ್ರೆ 100ಕ್ಕೂ ಅಧಿಕ ಸಮಾಲೋಚನೆ ಕ್ಲಿನಿಕ್, 100 ಹಾಸಿಗೆಗಳ ದೀರ್ಘಾವಧಿ ಸೇವೆ ಹಾಗೂ ಪುನರ್ವಸತಿ ಘಟಕ, ಪಿಇಟಿ-ಸಿಟಿ ಸ್ಕ್ಯಾನ್ ವ್ಯವಸ್ಥೆ ಇರುವ ಗ್ರಂಥಿ ವಿಜ್ಞಾನದ ಕೇಂದ್ರ, ಇಮೇಜಿಂಗ್‌ನ ಅತ್ಯಾಧುನಿಕ ಕೇಂದ್ರ, ಎಲ್ಲ ಪ್ರಮುಖ ರೋಗಗಳಿಗೆ 10 ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, 10 ಬೆಡ್‌ಗಳ ಡಯಾಲಿಸಿಸ್ ಘಟಕ, ಕ್ಯಾತ್ ಲ್ಯಾಬ್, ಐಸಿಯು/ಸಿಸಿಯು/ಎನ್‌ಐಸಿಯು/ಪಿಐಸಿಯು ಮೊದಲಾದವುಗಳು ಇರುವ ಅತ್ಯಾಧುನಿಕ ಕುಟುಂಬ ಆರೋಗ್ಯ ಸೇವೆಯ ಕೇಂದ್ರ ತುಂಬೆ ವಿ.ವಿ. ಆಸ್ಪತ್ರೆಯಾಗಿದೆ ಎಂದು ಮಾಹಿತಿ ನೀಡಿದರು.

ಅತ್ಯಾಧುನಿಕ 10 ಲೇಬರ್ ಹಾಗೂ ಹೆರಿಗೆ ಕೊಠಡಿ, ಎನ್‌ಐಸಿಯು, ಎಸ್‌ಸಿಬಿಯು, ವೆಲ್‌ಬೇಬಿ ಘಟಕ ಮೊದಲಾದವು ಸೇರಿದಂತೆ ತಾಯಿ ಹಾಗೂ ಮಗುವಿನ ಆರೋಗ್ಯ ಸೇವೆಗೆ ಆಸ್ಪತ್ರೆಯಲ್ಲಿ ಒಂದು ಮಹಡಿಯನ್ನು ಮೀಸಲಿರಿಸಲಾಗಿದೆ. ತುಂಬೆ ವಿ.ವಿ. ಆಸ್ಪತ್ರೆಯಲ್ಲಿ ಇರುವ ತುಂಬೆ ಫಾರ್ಮಸಿ ತ್ವರಿತ ಸೇವೆ, ನಿಖರತೆ ಹಾಗೂ ಔಷಧ ಸುರಕ್ಷತೆಗೆ ಔಷಧವನ್ನು ಸಿದ್ಧವಾಗಿರಿ ಸಲು ಹಾಗೂ ವಿತರಿಸಲು ಅಟೋಮ್ಯಾಟೆಡ್ ರೋಬಟಿಕ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ದೇಶದ ಅತಿ ದೊಡ್ಡ ರೋಬಟಿಕ್ ಫಾರ್ಮಸಿಯಾಗಿದೆ. ರೋಗಿಗೆ ಉತ್ತಮ ವಿಶ್ರಾಂತಿ ಹಾಗೂ ಸಂಪೂರ್ಣ ಗುಣಮುಖನಾಗಲು 'ಚಿಕಿತ್ಸಕ ಗಾರ್ಡನ್' ಇದೆ. ಇದರೊಂದಿಗೆ ಪ್ರೆಸಿಡೆನ್ಶಿಯಲ್ ಸೂಟ್ ರೂಮ್, ವಿಐಪಿ ರೂಮ್, ಖಾಸಗಿ ರೂಮ್ ಮೊದಲಾದ ಸೌಲಭ್ಯ ಲಭ್ಯವಿವೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರವಾಸಿಗಳಿಗೆ ಸೇವೆ ನೀಡಲು ಬದ್ಧ ವೈದ್ಯಕೀಯ ಪ್ರವಾಸೋದ್ಯಮ ವಿಭಾಗ ಇದೆ. ಇದಲ್ಲದೆ, ಹಲವು ರೆಸ್ಟೋರೆಂಟ್, ಸಿನೆಮಾ, ಕಾಫಿ ಶಾಪ್‌ಗಳು, ಹೆಲ್ತ್ ಕ್ಲಬ್, ಸಾವಿರಕ್ಕೂ ಅಧಿಕ ಪಾರ್ಕಿಂಗ್ ಅವಕಾಶ, ರೋಗಿಗಳಿಗೆ ಸೇವೆ ನೀಡಲು 50 ವಿವಿಧ ಭಾಷೆಗಳ 25 ವಿವಿಧ ದೇಶದ ವೃತ್ತಿಪರ ಕಾರ್ಯ ಪಡೆಯನ್ನು ಆಸ್ಪತ್ರೆ ಹೊಂದಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News