ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು: ಕೆಸಿಎಫ್ ಯುಎಇ

Update: 2019-12-19 06:21 GMT

ಯುಎಇ: ದೇಶದಾದ್ಯಂತ ತೀವ್ರ ಚರ್ಚೆ ಮತ್ತು ಹಿಂಸಾತ್ಮಕ ರೀತಿಯ ಹೋರಾಟಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಕೊಂಡ ಈ ಮಸೂದೆಯು ಒಂದು ಸಮುದಾಯವನ್ನು ನೇರ ಗುರಿಯಾಗಿರಿಸಿಕೊಂಡು ಜಾರಿಗೆ ತರಲಾಗಿದೆ ಎಂದು ಕೆಸಿಎಫ್ ಯುಎಇ ಆಕ್ರೋಶ ವ್ಯಕ್ತಪಡಿಸಿದೆ.

ಈಗಾಗಲೇ ಈ ಮಸೂದೆಯ ವಿರುದ್ಧ ದೇಶದಾದ್ಯಂತ ಹೋರಾಟದ ಕಿಚ್ಚು ಹೊತ್ತಿಕೊಂಡಿದ್ದು ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಎಂಬುದು ಕೂಡ ಖಾತ್ರಿಯಾಗಿದ್ದು ಇದರಿಂದ ಹಲವಾರು ಭಾರತೀಯರು ತೊಂದರೆ ಅನುಭವಿಸುವ ಸಾಧ್ಯತೆಯಿದೆ. ಜಾತಿ ಧರ್ಮದ ಆಧಾರದಲ್ಲಿ ಭಾರತೀಯ ಪೌರತ್ವವನ್ನು ನಿರ್ಧರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದ ಮಣ್ಣಲ್ಲೇ ಜನಿಸಿ,ಭಾರತದ ನೆಲ, ಜಲ, ಸಂಸ್ಕೃತಿಯನ್ನು ಗೌರವಿಸಿ ಭಾರತದ ಸೌಂದರ್ಯಕ್ಕೆ ವಿಶೇಷ ಮೆರುಗನ್ನು ತಂದ ತಾಜ್ ಮಹಲ್, ಕುತುಬ್ ಮಿನಾರ್ ರಂತಹ ಪ್ರೇಕ್ಷಣೀಯ ಪ್ರವಾಸಿ ತಾಣಗಳನ್ನು ಕೊಡುಗೆಯಾಗಿ ನೀಡಿದ ಭಾರತದ ಮುಸ್ಲಿಮರ ಪೌರತ್ವವನ್ನೇ ಪ್ರಶ್ನೆ ಮಾಡುವುದು ಅತ್ಯಂತ ಖೇದಕರ. ಈ ಮಸೂದೆಯು ಮುಸ್ಲಿಂ ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಗುರುತಿಸುವ ಷಡ್ಯಂತ್ರದ ಭಾಗವಾಗಿದೆ. ಮುಸ್ಲಿಮೇತರ ಆರರಷ್ಟು ಧರ್ಮಗಳಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂಬ ದ್ವಂದ್ವ ನಿಲುವು ಮುಸ್ಲಿಮರ ಮೇಲಿನ ದ್ವೇಷವಲ್ಲದೆ ಬೇರೇನೂ ಅಲ್ಲ. ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಈ ಮಸೂದೆಯ ಅಂಗೀಕಾರ ರಾಷ್ಟ್ರದಲ್ಲಿ ವಿಭಜನೆಯ ಆಸ್ತ್ರವೂ ಆಗಿದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಮೌಲ್ಯಕ್ಕೆ ವಿರುದ್ಧವಾಗಿ ಜಾರಿಗೆ ತಂದ ಈ ಮಸೂದೆಯು ಜನರಲ್ಲಿ ಭಯ ಮೂಡಿಸಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಕಂಡುಕೊಂಡ ಮಾರ್ಗವಾಗಿದೆ. ಭಾರತದಲ್ಲೇ ಹುಟ್ಟಿ ಬೆಳೆದು ಭಾರತದ ಅನ್ನ ನೀರು ಸೇವಿಸಿದ ಭಾರತೀಯನಿಗೆ ತನ್ನ ಭಾರತೀಯತೆಯನ್ನು ಸಾಬೀತುಪಡಿಸಬೇಕಾದ ಅಗತ್ಯವಿಲ್ಲ. ಇದರ ವಿರುದ್ಧ ಕಾನೂನು ರೀತಿಯ ಹೋರಾಟಕ್ಕೆ ಸಮುದಾಯ ಸಿದ್ಧವಾಗಬೇಕು. ಭಾರತದ ಭಾವೈಕ್ಯತೆಯನ್ನು ಎತ್ತಿ ಹಿಡಿದು ಜಾತಿ ಭೇದ ಮರೆತು ಸರ್ವರೂ ಈ ಹೋರಾಟದಲ್ಲಿ ಭಾಗಿಯಾಗಬೇಕು. ಭಾರತದ ಸಂವಿಧಾನಕ್ಕೆ ವಿರುದ್ಧವಾಗಿ ಜಾರಿಗೆ ತರುವ ಜನ ವಿರೋಧಿ ಕಾನೂನನ್ನು ಹಿಂಪಡೆಯಬೇಕು ಎಂದು ನ್ಯಾಯಾಂಗ ವ್ಯವಸ್ಥೆಯೊಂದಿಗೆ ಕೆಸಿಎಫ್ ಯುಎಇ ಒತ್ತಾಯಿಸುತ್ತದೆ ಎಂದು ಕೆಸಿಎಫ್ ಯುಎಇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News