ಜಮಾಲ್ ಖಶೋಗಿ ಹತ್ಯೆ ಪ್ರಕರಣ: ಐವರಿಗೆ ಮರಣದಂಡನೆ

Update: 2019-12-23 15:44 GMT

 ರಿಯಾದ್,ಡಿ.23: ಸೌದಿ ಅರೇಬಿಯಾ ಮೂಲದ ಪತ್ರಕರ್ತ ಹಾಗೂ ಅಮೆರಿಕದ ವಾಷಿಂಗ್ಟನ್ ಪೋಸ್ಟ್‌ನ ಅಂಕಣಕಾರ ಜಮಾಲ್ ಖಶೋಗಿ ಕೊಲೆ ಪ್ರಕರಣದಲ್ಲಿ ಐವರಿಗೆ ಇಲ್ಲಿಯ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ. ಆದರೆ ಪ್ರಕರಣದಲ್ಲಿ ತನಿಖೆಯನ್ನು ಎದುರಿಸಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿದೆ.

ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಐವರಿಗೆ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿದೆ ಎಂದು ಸೌದಿ ಅರೇಬಿಯಾ ಪ್ರಾಸಿಕ್ಯೂಟರ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೌದಿ ಆಡಳಿತದ ಮಾಧ್ಯಮ ಸಲಹೆಗಾರ ಸೌದ್ ಅಲ್-ಕಹ್ತಾನಿ ಅವರ ಸೂಚನೆಯ ಮೇರೆಗೆ ಸೌದಿ ಗುಪ್ತಚರ ಇಲಾಖೆಯ ಉಪ ಮುಖ್ಯಸ್ಥ ಅಹ್ಮದ್ ಅಲ್-ಅಸ್ಸಿರಿ ಅವರು 2018,ಅಕ್ಟೋಬರ್‌ನಲ್ಲಿ ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿಯ ಸೌದಿ ರಾಯಭಾರಿ ಕಚೇರಿಯಲ್ಲಿ ನಡೆದಿದ್ದ ಖಶ್ಶೋಗಿ ಹತ್ಯೆಯ ಉಸ್ತುವಾರಿ ವಹಿಸಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ಈ ಮೊದಲು ತಿಳಿಸಿದ್ದರು.

ಕಹ್ತಾನಿ ಅವರನ್ನು ತನಿಖೆಗೊಳಪಡಿಸಲಾಗಿತ್ತಾದರೂ ಸಾಕಷ್ಟು ಸಾಕ್ಷಾಧಾರಗಳ ಕೊರತೆಯಿಂದಾಗಿ ಪ್ರಕರಣದಲ್ಲಿ ಹೆಸರಿಸಿರಲಿಲ್ಲ. ಅಸ್ಸಿರಿ ವಿರುದ್ಧ ಆರೋಪ ಹೊರಿಸಲಾಗಿತ್ತಾದರೂ ಅವರನ್ನೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.

ಪ್ರಕರಣದಲ್ಲಿ 11 ಅನಾಮಿಕ ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಗಿದ್ದು,ಐವರಿಗೆ ಮರಣ ದಂಡನೆ ಮತ್ತು ಮೂವರಿಗೆ ಒಟ್ಟು 24 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ. ಇತರರನ್ನು ಬಿಡುಗಡೆಗೊಳಿಸಲಾಗಿದೆ.

ನ್ಯಾಯಾಲಯವು ಒಂಭತ್ತು ದಿನಗಳ ಕಾಲ ಪ್ರಕರಣದ ವಿಚಾರಣೆಯನ್ನು ನಡೆಸಿದ್ದು,ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿಗಳು ಮತ್ತು ಖಶೋಗಿ ಬಂಧುಗಳು ಉಪಸ್ಥಿತರಿದ್ದರು ಎಂದು ಪ್ರಾಸಿಕ್ಯೂಟರ್ ತಿಳಿಸಿದರು. ಖಶೋಗಿ ಹತ್ಯೆ ಪೂರ್ವನಿಯೋಜಿತವಾಗಿರಲಿಲ್ಲ ಎನ್ನುವುದು ದೃಢಪಟ್ಟ್ಟಿದೆ ಎಂದೂ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News