ಅಬುಧಾಬಿ: ಫೆ. 28ರಂದು ಮಂಗಳೂರು ಫೆಸ್ಟ್, ಕ್ರಿಕೆಟ್ ಕಾರ್ನಿವಲ್-2020
ಅಬುಧಾಬಿ, ಜ.28: ಇಲ್ಲಿಯ ಮಂಗಳೂರಿಯನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಆಶ್ರಯದಲ್ಲಿ ಫೆ.28ರಂದು ಶೇಖ್ ಝಾಯೆದ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಮಂಗಳೂರು ಕಪ್ 2020 (ಸೀಸನ್-8) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ, ಥ್ರೋಬಾಲ್ ಪಂದ್ಯ ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಪದ್ಯಾವಳಿಯನ್ನು ಭಾರತೀಯ ಆಟಗಾರರಿಗಾಗಿಯೇ ನಡೆಸಲಾಗುವುದು. ಯುಎಇಯ ಅತ್ಯಂತ ದೊಡ್ಡ ಡ್ಯಾನ್ಸ್ ಸ್ಪರ್ಧೆ (ಗ್ರೂಪ್ ಮತ್ತು ಸೋಲೊ)ಯಾಗಿರುವ ಡ್ಯಾನ್ಸಸ್ಪಿರೇಷನ್-2020 ಕೂಡ ನಡೆಯಲಿದೆ. ಜೊತೆಗೆ ಕೌಟುಂಬಿಕ ಮನರಂಜನೆ, ಪುಟಾಣಿಗಳಿಗಾಗಿ ಕ್ರೀಡೆಗಳು, ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆ ಇವು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿವೆ. ಕ್ರೀಡೆ ಮತ್ತು ಡ್ಯಾನ್ಸ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಗಳಲ್ಲಿ ಹಲವಾರು ಪ್ರತಿನಿಧಿಗಳು,ಮಂಗಳೂರಿಯನ್ ಉದ್ಯಮಿಗಳು, ಖ್ಯಾತ ಕ್ರಿಕೆಟ್ ಆಟಗಾರರು ಉಪಸ್ಥಿತರಿರಲಿದ್ದಾರೆ. ಸಭಿಕರು ಮನರಂಜನೆಯ ಜೊತೆಗೆ ಲಕ್ಕಿ ಡ್ರಾ ಬಹುಮಾನಗಳನ್ನೂ ಪಡೆಯಲಿದ್ದಾರೆ.
ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ವಿಕೆಟ್ ಕೀಪರ್,ಅತ್ಯುತ್ತಮ ಫೀಲ್ಡರ್, ಅತ್ಯುತ್ತಮ ಆಲ್‌ರೌಂಡರ್, ಅತ್ಯುತ್ತಮ ಕ್ಯಾಚರ್ ಮತ್ತು ಅಂತಿಮ ಪಂದ್ಯದಲ್ಲಿ ಪಂದ್ಯಪುರುಷ ಮತ್ತು ಪ್ರತಿ ಲೀಗ್‌ನಲ್ಲಿಯೂ ಪಂದ್ಯ ಪುರುಷ ವಿಭಾಗಗಳಲ್ಲಿ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಗುವುದು. ವಿಜೇತರು ಒಟ್ಟು 25,000 ಎಇಡಿ ಮೌಲ್ಯದ ಬಹುಮಾನಗಳನ್ನು ಪಡೆಯಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂಸಿಸಿ ಅಧ್ಯಕ್ಷ ಲತೀಫ್ ಕೆ.ಎಚ್ ಅವರು,‘ ಸತತ ಎಂಟನೇ ವರ್ಷಕ್ಕೆ ಎಂಸಿಸಿ ಪಂದ್ಯಾವಳಿ ಯನ್ನು ಆಯೋಜಿಲಾಗಿದ್ದು, ವರ್ಷದಿಂದ ವರ್ಷಕ್ಕೆ ಅದು ವಿಸ್ತಾರಗೊಳ್ಳುತ್ತಿದೆ. ಅಂತರರಾಷ್ಟ್ರಿಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯು ಸಾವಿರಾರು ಕ್ರೀಡಾಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಹಿಂದಿನ ಏಳು ಸೀಸನ್‌ಗಳಲ್ಲಿ ಯುಎಇಯ ಕ್ರಿಕೆಟ್ ಪ್ರೇಮಿಗಳು ಮತ್ತು ಕನ್ನಡಿಗರು ಅದ್ಭುತ ಬೆಂಬಲವನ್ನು ನೀಡಿದ್ದಾರೆ. ಕಳೆದ ಸೀಸನ್‌ನಂತೆ ಈ ಸೀಸನ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಮತ್ತು 10,000ಕ್ಕೂ ಹೆಚ್ಚು ವೀಕ್ಷಕರನ್ನು ನಾವು ನಿರೀಕ್ಷಿಸಿದ್ದೇವೆ ’ಎಂದು ತಿಳಿಸಿದರು.
ಎಂಸಿಸಿ ಅಬುಧಾಬಿ ಯುಎಇಯ ಪ್ರಮುಖ ಮತ್ತು ಅತ್ಯಂತ ಪ್ರತಿಷ್ಠಿತ ಕ್ಲಬ್‌ಗಳಲ್ಲೊಂದಾಗಿದೆ. ಗಣ್ಯ ಮಂಗಳೂರಿಗರಾದ ರೊನಾಲ್ಡ್ ಪಿಂಟೋ ಹೈಸ್ನಾ, ಇಂಟರ್‌ನ್ಯಾಷನಲ್ ಮತ್ತು ವಾಲ್ಟರ್ ಆಲ್ಮೇಡಾ, ರೀಗಲ್ ಅವರು ಮುನ್ನಡೆಸುತ್ತಿರುವ ಎಂಸಿಸಿಯ ಮುಖ್ಯ ಉದ್ದೇಶವು ಮಂಗಳೂರು ಉದ್ಯಮ ಸಮುದಾಯವು ಒಂದೆಡೆ ಸೇರಲು ವೇದಿಕೆಯನ್ನು ಒದಗಿಸುವುದಾಗಿದೆ. ತವರಿನ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೌಲ್ಯಗಳೊಂದಿಗೆ ಬಂಧವನ್ನು ಗಟ್ಟಿಗೊಳಿಸುತ್ತಿರುವ ಎಂಸಿಸಿ ಕನ್ನಡಿಗ ಎನ್‌ಆರ್‌ಐ ಯುವ ಕ್ರಿಕೆಟಿಗರನ್ನು ಬೆಳೆಸುವ ಮೂಲಕ ಅವರಿಗೆ ಅಂತರರಾಷ್ಟ್ರೀಯ ಅವಕಾಶಗಳನ್ನೂ ಒದಗಿಸುತ್ತಿದೆ. ಎಂಸಿಸಿ ಮಂಗಳೂರು ಫೆಸ್ಟ್ ವಿವಿಧ ಸಂಸ್ಕೃತಿಗಳು ಮತ್ತು ಸಮುದಾಯಗಳ ನಡುವೆ ಸ್ನೇಹವನ್ನು ಬಲಗೊಳಿಸುತ್ತಿದೆ. ಪಂದ್ಯಾವಳಿಗೆ ತಂಡಗಳ ನೋಂದಣಿ ಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: +971-50-6713247, +971-55-3501008, ಇಮೇಲ್: info@mccabudhabi.com , lathif@mccabudhabi.com, www.mccabudhabi.com