ಕೊಲ್ಲಿ ರಾಷ್ಟ್ರಗಳ ನಾಗರಿಕರಿಗೆ ಮಕ್ಕಾ, ಮದೀನಾ ಪ್ರವೇಶ ನಿಷೇಧ

Update: 2020-02-29 15:53 GMT

ರಿಯಾದ್ (ಸೌದಿ ಅರೇಬಿಯ), ಫೆ. 29: ನೂತನ-ಕೊರೋನವೈರಸ್ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಆರು ರಾಷ್ಟ್ರಗಳ ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ನಾಗರಿಕರು ಎರಡು ಅತ್ಯಂತ ಪವಿತ್ರ ನಗರಗಳಿಗೆ ಭೇಟಿ ನೀಡುವುದನ್ನು ಸೌದಿ ಅರೇಬಿಯ ಶುಕ್ರವಾರ ನಿಷೇಧಿಸಿದೆ.

ಮಕ್ಕಾ ಮತ್ತು ಮದೀನಾಗಳಿಗೆ ಮಂಡಳಿಯ ದೇಶಗಳಿಗೆ ಸೇರಿದ ನಾಗರಿಕರು ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೈನ್, ಕುವೈತ್, ಒಮಾನ್ ಮತ್ತು ಕತರ್ ದೇಶಗಳು ಕೊಲ್ಲಿ ಸಹಕಾರ ಮಂಡಳಿಯ ಸದಸ್ಯ ದೇಶಗಳಾಗಿವೆ.

ನಿಷೇಧವು ಸೌದಿ ಪ್ರಜೆಗಳಿಗೂ ಅನ್ವಯಿಸುತ್ತದೆಯೇ ಎನ್ನುವುದನ್ನು ಸಚಿವಾಲಯ ತಿಳಿಸಿಲ್ಲ. ಆದರೆ, ನಿರಂತರ 14 ದಿನಗಳ ಕಾಲ ಸೌದಿ ಅರೇಬಿಯದಲ್ಲಿರುವ ಹಾಗೂ ಕೊರೋನವೈರಸ್ ಸೋಂಕಿನ ಲಕ್ಷಣಗಳನ್ನು ತೋರಿಸದಿರುವ ಮಂಡಳಿಯ ನಾಗರಿಕರಿಗೆ ನಿಷೇಧದಿಂದ ವಿನಾಯಿತಿ ಇದೆ ಎಂದು ಅದು ಹೇಳಿದೆ.

ಮಂಡಳಿಗೆ ಸೇರಿದ ದೇಶಗಳ ನಾಗರಿಕರು ತಮ್ಮ ರಾಷ್ಟ್ರೀಯ ಗುರುತು ಚೀಟಿಯನ್ನು ತೋರಿಸಿ ಸೌದಿ ಅರೇಬಿಯವನ್ನು ಪ್ರವೇಶಿಸಬಹುದಾಗಿದೆ. ಆದರೆ ಇತರ ದೇಶಗಳ ಪ್ರಜೆಗಳಿಗೆ ವೀಸಾ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News