ದುಬೈ: ಭಾರತೀಯ ವಿದ್ಯಾರ್ಥಿಯಲ್ಲಿ ಕೊರೋನವೈರಸ್ ಸೋಂಕು

Update: 2020-03-05 16:09 GMT

ದುಬೈ, ಮಾ. 5: ದುಬೈಯಲ್ಲಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ನೂತನ-ಕೊರೋನವೈರಸ್ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಮಾರಕ ರೋಗದ ಸೋಂಕಿಗೆ ಒಳಗಾದವರ ಸಂಖ್ಯೆ 27ಕ್ಕೇರಿದೆ.

‘‘ದುಬೈಯಲ್ಲಿರುವ ಭಾರತೀಯ ಶಾಲೆಯೊಂದರ 16 ವರ್ಷದ ವಿದ್ಯಾರ್ಥಿಯೊಬ್ಬರು ಕೊರೋನವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ವಿದ್ಯಾರ್ಥಿಯ ತಂದೆ ವಿದೇಶಗಳಿಗೆ ಪ್ರಯಾಣಿಸುತ್ತಿದ್ದು, ಅವರಿಂದ ವಿದ್ಯಾರ್ಥಿಗೆ ಸೋಂಕು ಹರಡಿದೆ’’ ಎಂದು ದುಬೈ ಆರೋಗ್ಯ ಪ್ರಾಧಿಕಾರ (ಡಿಎಚ್‌ಎ)ವನ್ನು ಉಲ್ಲೇಖಿಸಿ ‘ಗಲ್ಫ್ ನ್ಯೂಸ್’ ಗುರುವಾರ ವರದಿ ಮಾಡಿದೆ.

‘‘ತಂದೆಯಲ್ಲಿ ದುಬೈಗೆ ಮರಳಿದ ಐದು ದಿನಗಳ ಬಳಿಕ ಕೊರೋನವೈರಸ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡವು. ವಿದ್ಯಾರ್ಥಿ ಮತ್ತು ಅವರ ಕುಟುಂಬ ಸದಸ್ಯರನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೆಕಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’’ ಎಂದು ಪತ್ರಿಕೆ ತಿಳಿಸಿದೆ.

ಶಾಲೆ ಅನಿರ್ದಿಷ್ಟಾವಧಿ ಬಂದ್

ಈ ನಡುವೆ, ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿ ಕಲಿಯುತ್ತಿರುವ ದುಬೈಯ ‘ಇಂಡಿಯನ್ ಹೈ ಗ್ರೂಪ್ ಆಫ್ ಸ್ಕೂಲ್’ ಶಾಲೆಯನ್ನು ಗುರುವಾರದಿಂದ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News