ಸೌದಿ: ಮೂವರು ರಾಜಕುಮಾರರ ಬಂಧನ

Update: 2020-03-07 15:18 GMT
ಫೈಲ್ ಚಿತ್ರ

ರಿಯಾದ್ (ಸೌದಿ ಅರೇಬಿಯ), ಮಾ. 7: ಕ್ಷಿಪ್ರಕ್ರಾಂತಿಗೆ ಸಂಚು ರೂಪಿಸಿದ ಆರೋಪದಲ್ಲಿ ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಸಹೋದರ ಮತ್ತು ಸೋದರಳಿಯ ಸೇರಿದಂತೆ ಮೂವರು ರಾಜಕುಮಾರರನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

 ಈ ಮೂಲಕ ಸೌದಿ ಅರೇಬಿಯದ ವಾಸ್ತವಿಕ ಆಡಳಿತಗಾರನಾಗಿರುವ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತನ್ನ ಅಧಿಕಾರವನ್ನು ಮತ್ತಷ್ಟು ಭದ್ರಪಡಿಸಿದ್ದಾರೆ ಎಂದು ಹೇಳಲಾಗಿದೆ.

ಈ ಬಂಧನದೊಂದಿಗೆ ಯುವರಾಜನಿಗೆ ಎದುರಾಗಬಹುದಾದ ಕೊನೆಯ ಸಂಭಾವ್ಯ ವಿರೋಧವೂ ದೂರಾಗಿದೆ.

ದೊರೆ ಸಲ್ಮಾನ್‌ರ ಓರ್ವ ಸಹೋದರ ರಾಜಕುಮಾರ ಅಹ್ಮದ್ ಬಿನ್ ಅಬ್ದುಲಝೀಝ್ ಅಲ್-ಸೌದ್ ಮತ್ತು ದೊರೆಯ ಸೋದರಳಿಯ ರಾಜಕುಮಾರ ಮುಹಮ್ಮದ್ ಬಿನ್ ನಯೀಫ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ ಹಾಗೂ ಅವರನ್ನು ಶುಕ್ರವಾರ ಮುಂಜಾನೆ ಕಪ್ಪು ಬಟ್ಟೆ ಧರಿಸಿದ ಪೊಲೀಸರು ಅವರ ಮನೆಗಳಿಂದ ಕರೆದುಕೊಂಡು ಹೋದರು ಎಂದು ಮೂಲಗಳನ್ನು ಉಲ್ಲೇಖಿಸಿ ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಈ ಇಬ್ಬರು ಒಂದು ಕಾಲದಲ್ಲಿ ಸೌದಿ ಸಿಂಹಾಸನಕ್ಕೆ ಪ್ರಬಲ ದಾವೇದಾರರಾಗಿದ್ದರು.

ದೊರೆ ಮತ್ತು ಯುವರಾಜರನ್ನು ಅಧಿಕಾರದಿಂದ ಕೆಳಗಿಳಿಸಲು ಅವರು ಪಿತೂರಿ ಹೂಡಿದ್ದಾರೆ ಎಂದು ಸೌದಿ ರಾಜ ಆಸ್ಥಾನ ಆರೋಪಿಸಿದೆ. ಅವರಿಗೆ ಜೀವಿತಾವಧಿ ಜೈಲು ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಾಗಬಹುದು ಎಂದು ಪತ್ರಿಕೆ ಹೇಳಿದೆ.

ಈ ಬಂಧನಗಳ ಬಗ್ಗೆ ‘ನ್ಯೂಯಾರ್ಕ್ ಟೈಮ್ಸ್’ ಕೂಡ ವರದಿ ಮಾಡಿದೆ. ರಾಜಕುಮಾರ ನಯೀಫ್‌ ರ ತಮ್ಮ ರಾಜಕುಮಾರ ನವಾಫ್ ಬಿನ್ ನಯೀಫ್‌ರನ್ನೂ ಬಂಧಿಸಲಾಗಿದೆ ಎಂದು ಹೇಳಿದೆ.

ಸೌದಿ ಅರೇಬಿಯದ ಅಧಿಕಾರಿಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News