ಸೌದಿ: ಸೋಂಕು ಪೀಡಿತರ ಸಂಖ್ಯೆ 15ಕ್ಕೇರಿಕೆ

Update: 2020-03-09 17:30 GMT

 ದುಬೈ,ಮಾ.9: ಸೌದಿ ಅರೇಬಿಯದಲ್ಲಿ ಅತ್ಯಧಿಕ ಕೊರೋನ ವೈರಸ್ ಸೋಕಿನ ಪ್ರರಣಗಳು ವರದಿಯಾಗಿರುವ ತೈಲ ಸಮೃದ್ಧ ಖ್ವಾತಿಫ್ ಪ್ರಾಂತಕ್ಕೆ ತಾತ್ಕಾಲಿಕವಾಗಿ ಬೀಗಜಡಿಯಲಾಗಿದೆ ಹಾಗೂ ಎಲ್ಲಾ ಶಾಲೆಗಳು ಹಾಗೂ ವಿಶ್ವವಿದ್ಯಾನಿಲಯಗಳಿಗೆ ರಜೆ ಸಾರಲಾಗಿದೆ. ಸೋಮವಾರ ಖ್ವಾತಿಫ್ ಪ್ರಾಂತದಲ್ಲಿ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರಲ್ಲೊಬ್ಬರು ಅಮೆರಿಕನ್ ನಾಗರಿಕರಾಗಿದ್ದು, ಇತ್ತೀಚೆಗಷ್ಟೇ ಇಟಲಿಯಿಂದ ಆಗಮಿಸಿದ್ದರು. ಇನ್ನೊಬ್ಬರು ಫಿಲಿಪ್ಪೀನ್ಸ್ ಮೂಲದವರಾಗಿದ್ದಾರೆ. ಇದರೊಂದಿಗೆ ಸೌದಿಯಲ್ಲಿ ಕೊರೋನ ವೈರಸ್ ಪೀಡಿತರ ಒಟ್ಟು ಸಂಖ್ಯೆ 15ಕ್ಕೇರಿದೆ. ಕೊರೋನ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ನೆರೆಹೊರೆಯ ರಾಷ್ಟ್ರ ಗಳಾದ ಬಹರೈನ್, ಕುವೈತ್ ಹಾಗೂ ಈಜಿಪ್ಟ್ ದೇಶಗಳಿಗೆ ಪ್ರಯಾಣಿಸುವುದಕ್ಕೆ ಸೌದಿ ಆರೇಬಿಯ ಸಂಪೂರ್ಣ ನಿಷೇಧ ವಿಧಿಸಿದೆ. ಈಗಾಗಲೇ ಕೊರೋನ ಹಾವಳಿ ಪೀಡಿತ ಇರಾನ್ ದೇಶಕ್ಕೆ ಪ್ರಯಾಣವನ್ನು ನಿಷೇಧಿಸಿದೆ.

 ಆದಾಗ್ಯೂ ಕೊರೋನ ವೈರಸ್ ಹಾವಳಿಯು ಖ್ವಾತಿಫ್ ಪ್ರಾಂತದಲ್ಲಿ ತೈಲ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದೆಂದು ಸೌದಿ ಆರೇಬಿಯ ದೃಢಪಡಿಸಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಖ್ವಾತಿಫ್ ಪ್ರಾಂತದಲ್ಲಿ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆಯೆಂದು ಗೃಹ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

  ಈ ಮಧ್ಯೆ ಮಾರ್ಚ್ 23ರಂದು ಆರಂಭಗೊಳ್ಳಲಿದ್ದ ಸೌದಿ ಕ್ರೀಡಾಕೂಟವನ್ನು ಮುಂದೂಡಲಾಗಿದೆಯೆಂದು ಅಲ್ ಅರಬಿಯ ಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News