ಕೊರೊನಾ ಭೀತಿ: ಭಾರತ ಸಹಿತ ಹಲವು ದೇಶಗಳಿಗೆ ಪ್ರಯಾಣ ನಿಷೇಧ ಹೇರಿದ ಸೌದಿ

Update: 2020-03-12 11:19 GMT

ರಿಯಾದ್: ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು  ಭಾರತ ಸಹಿತ ಹಲವಾರು ದೇಶಗಳಿಗೆ ತೆರಳುವುದಕ್ಕೆ ಹಾಗೂ ಅಲ್ಲಿಂದ ಆಗಮಿಸುವುದಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ. ಈ ತಾತ್ಕಾಲಿಕ ಪ್ರಯಾಣ ನಿಷೇಧವು  ಸೌದಿ ನಾಗರಿಕರಿಗೆ ಹಾಗೂ ವಿದೇಶಿಗರಿಗೂ ಅನ್ವಯವಾಗುವುದು.

ಸೌದಿ ಸರಕಾರ ಭಾರತಕ್ಕೆ ಹಾಗೂ ಭಾರತದಿಂದ ವಿಮಾನಗಳು ಸೌದಿಗೆ ಆಗಮಿಸುವುದಕ್ಕೆ ನಿಷೇಧ ಹೇರಿದೆ.  ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು, ಸ್ವಿಝರ್ ಲ್ಯಾಂಡ್, ಪಾಕಿಸ್ತಾನ, ಶ್ರೀಲಂಕಾ, ಫಿಲಿಪ್ಪೀನ್ಸ್. ಸುಡಾನ್, ಇಥಿಯೋಪಿಯ, ದಕ್ಷಿಣ ಸುಡಾನ್, ಎರಿಟ್ರಿಯಾ, ಕೆನ್ಯಾ ಹಾಗೂ ಸೊಮಾಲಿಯಾ ದೇಶಗಳಿಗೂ ಸೌದಿಯ ಈ ಪ್ರಯಾಣ ನಿಷೇಧ ಅನ್ವಯಿಸುತ್ತದೆ.

ಸೌದಿ ಅರೇಬಿಯಾಗೆ ತೆರಳುವ 14 ದಿನಗಳ ಕಾಲ ಇಲ್ಲಿ ತಿಳಿಸಲಾದ ದೇಶಗಳಲ್ಲಿದ್ದ ನಾಗರಿಕರು, ವಲಸಿಗರು ಹಾಗೂ ವಿದೇಶೀಯರಿಗೂ ಪ್ರವೇಶ ನಿಷಿದ್ಧವಾಗಿದೆ. ಆದರೆ ಸೌದಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮತ್ತು ಫಿಲಿಪ್ಪೀನ್ಸ್ ನಾಗರಿಕರಿಗೆ  ಈ ಪ್ರಯಾಣ ನಿಷೇಧ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲದೆ  ಶಿಪ್ಪಿಂಗ್, ಉದ್ಯಮ ಸಂಬಂಧಿತ ಪ್ರವಾಸಗಳು ಈ ಆದೇಶಕ್ಕೆ ಹೊರತಾಗಿವೆ.

ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಾ ವಾಣಿಜ್ಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಕುವೈತ್ ಈಗಾಗಲೇ ಭಾರತ ಸಹಿತ ಹಲವು ದೇಶಗಳಿಂದ ಕುವೈತ್‍ ಗೆ ಆಗಮಿಸುವುದಕ್ಕೆ ನಿಷೇಧ ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News