ಅಜ್ಮಾನ್ : ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಅಡ್ವಾನ್ಸ್ಡ್ ಇ-ಲರ್ನಿಂಗ್ ಸೌಲಭ್ಯ

Update: 2020-03-19 17:52 GMT

ಅಜ್ಮಾನ್ (ಯುಎಇ),ಮಾ.19: ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ಯು ಕೋವಿಡ್-19 ಮುನ್ನೆಚ್ಚರಿಕೆ ಅವಧಿಯಲ್ಲಿ ಅಡ್ವಾನ್ಸ್ಡ್ ಇ-ಲರ್ನಿಂಗ್ ಸೌಲಭ್ಯವನ್ನು ಜಾರಿಗೊಳಿಸುವ ಮೂಲಕ ಸಾಮಾನ್ಯ ಕಲಿಕಾ ಪದ್ಧತಿಗಳಿಗೆ ಮೀರಿದ ವ್ಯವಸ್ಥೆಯನ್ನು ರೂಪಿಸುವ ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದೆ.

 ಇ-ಲರ್ನಿಂಗ್‌ಗೆ ವಿವಿಯ ಸಿದ್ಧತೆಗಳು ಮತ್ತು ಸನ್ನದ್ಧತೆಯ ಕುರಿತು ಮಾತನಾಡಿದ ಜಿಎಂಯು ಕುಲಪತಿ ಪ್ರೊ.ಹೋಶಮ್ ಹಾಮ್ದಿ ಅವರು,‘ಇ-ಲರ್ನಿಂಗ್‌ನ ಯಶಸ್ವಿ ಅನುಷ್ಠಾನಕ್ಕೆ ಎರಡು ಮಹತ್ವದ ಅಂಶಗಳ ಕಡೆಗೆ ಗಮನ ಹರಿಸುವುದು ಅಗತ್ಯವಾಗುತ್ತದೆ; ಬೋಧಕ ವೃಂದ ಮತ್ತು ವಿದ್ಯಾರ್ಥಿಗಳ ಪರಸ್ಪರ ತೊಡಗುವಿಕೆಯನ್ನು ಹೆಚ್ಚಿಸುವುದು ಹಾಗೂ ವಿದ್ಯಾರ್ಥಿಗಳಿಗೆ ನಿರಂತರವಾಗಿ ಮರುಮಾಹಿತಿಗಳನ್ನು ಪೂರೈಸುವುದು ಮತ್ತು ಅವರ ವಿಚಾರಣೆಗಳಿಗೆ ತ್ವರಿತವಾಗಿ ಸ್ಪಂದಿಸುವುದು. ನಾವೀಗಾಗಲೇ ಎಲ್ಲ ಕಾಲೇಜುಗಳು ಮತ್ತು ಪ್ರೋಗ್ರಾಮ್‌ಗಳ ವಿದ್ಯಾರ್ಥಿ ಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ನೂತನ ಕಲಿಕಾ ಪ್ರಕ್ರಿಯೆಯ ಬಗ್ಗೆ ಅವರಿಗೆ ವಿವರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ತಡೆ ರಹಿತ ಪ್ರಗತಿಯನ್ನು ಖಚಿತಪಡಿಸಲು ವಿದ್ಯಾರ್ಥಿಗಳು ಮತ್ತು ಬೋಧಕರಿಗಾಗಿ ವಿವಿಧ ಚಟುವಟಿಕೆಗಳು, ಮರು ಮಾಹಿತಿಗಳು ಮತ್ತು ಉತ್ತಮ ಕಲಿಕಾ ಸಂಪನ್ಮೂಲಗಳ ನ್ನೊಳಗೊಂಡ ಮಾರ್ಗದರ್ಶಿಗಳನ್ನು ತಂದಿದ್ದೇವೆ. ವಿದ್ಯಾರ್ಥಿಗಳಿಗೆ ನಿರಂತರ ಬೆಂಬಲವನ್ನು ಒದಗಿಸಲಾಗುತ್ತದೆ’ ಎಂದು ತಿಳಿಸಿದರು.

ಜಿಎಂಯು ತನ್ನ ಅಧೀನದ ಆರು ಕಾಲೇಜುಗಳಲ್ಲಿಯ 26 ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳ ತಡೆರಹಿತ ವ್ಯಾಸಂಗಕ್ಕಾಗಿ ಬೋಧಕವೃಂದಕ್ಕೆ ವಿವಿಧ ಬಗೆಯ ಇ-ಲರ್ನಿಂಗ್ ತಂತ್ರಜ್ಞಾನಗಳ ಬಳಕೆಯ ಕುರಿತು ತರಬೇತಿ ನೀಡಲು ಕಾರ್ಯಾಗಾರ ವೊಂದನ್ನು ಇತ್ತೀಚಿಗೆ ಹಮ್ಮಿಕೊಂಡಿತ್ತು.

ಜಿಎಂಯು ಈಗಾಗಲೇ ಇಲೆಕ್ಟ್ರಾನಿಕ್ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ವಿದ್ಯಾರ್ಥಿಗಳು ಅದನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದ ಪ್ರೊ.ಹಾಮ್ದಿ,‘ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಬಳಸಿ ಪಾಠಗಳು/ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದಷ್ಟಕ್ಕೆ ಅದು ಇ-ಲರ್ನಿಂಗ್ ಆಗುವುದಿಲ್ಲ. ವಿದ್ಯಾರ್ಥಿಗಳಿಗೆ ನಾವು ಏನು ಒದಗಿಸುತ್ತೇವೆ ಮತ್ತು ಅದು ಅವರ ಕಲಿಕಾ ಪ್ರಕ್ರಿಯೆಯನ್ನು ಎಷ್ಟು ಪರಿಣಾಮಕಾರಿಯಾಗಿ ಸಮೃದ್ಧಗೊಳಿಸುತ್ತದೆ ಎನ್ನುವುದು ಮುಖ್ಯವಾಗಿದೆ. ಜಿಎಂಯುದಲ್ಲಿ ನಾವು ಅದು ದೂರಶಿಕ್ಷಣ ವಿಧಾನವಾಗಲಿ ಅಥವಾ ಕ್ಯಾಂಪಸ್‌ನಲ್ಲಿ ಬೋಧನೆಯಾಗಲಿ ಉತ್ತಮ ಕಲಿಕೆಯನ್ನು ಸಾಧ್ಯವಾಗಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೇವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News