ವಿಮಾನ ಹಾರಾಟ ಸ್ಥಗಿತಗೊಳಿಸುವ ನಿರ್ಧಾರದಿಂದ ಹಿಂದೆ ಸರಿದ ಎಮಿರೇಟ್ಸ್

Update: 2020-03-23 17:33 GMT

ದುಬೈ, ಮಾ. 23: ಕೊರೋನವೈರಸ್ ಭೀತಿ ಹಿನ್ನೆಲೆಯಲ್ಲಿ, ಎಲ್ಲ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸುವ ತನ್ನ ನಿರ್ಧಾರವನ್ನು ದುಬೈಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ರವಿವಾರ ಹಿಂದಕ್ಕೆ ಪಡೆದಿದೆ.

ಕೊರೋನವೈರಸ್ ಹರಡುವಿಕೆಯನ್ನು ತಡೆಯುವ ಕ್ರಮವಾಗಿ ಮಾರ್ಚ್ 25ರಿಂದ ಎಲ್ಲ ಪ್ರಯಾಣಿಕ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂಬುದಾಗಿ ಈ ಮೊದಲು ಎಮಿರೇಟ್ಸ್ ಘೋಷಿಸಿತ್ತು.

ಇದಾದ ಕೆಲವೇ ಗಂಟೆಗಳಲ್ಲಿ ಇನ್ನೊಂದು ಪ್ರಕಟನೆಯನ್ನು ನೀಡಿದ ವಾಯುಯಾನ ಸಂಸ್ಥೆ, ದುಬೈಗೆ ಬಂದವರು ತಮ್ಮ ದೇಶಗಳಿಗೆ ವಾಪಸಾಗಲು ಸಾಧ್ಯವಾಗುವಂತೆ 13 ನಗರಗಳಿಗೆ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಮುಂದುವರಿಸಲಾಗುವುದು ಎಂದು ಹೇಳಿತು. ಸಾಮಾನ್ಯವಾಗಿ ಸಂಸ್ಥೆಯ ವಿಮಾನಗಳು 159 ನಗರಗಳಿಗೆ ಹಾರುತ್ತವೆ.

ಪ್ರಯಾಣಿಕರ ವಾಪಸಾತಿಗೆ ಸಹಕರಿಸುವಂತೆ ಸರಕಾರಗಳು ಮತ್ತು ಗ್ರಾಹಕರಿಂದ ಬಂದ ಮನವಿಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಬ್ರಿಟನ್, ಸ್ವಿಟ್ಸರ್‌ಲ್ಯಾಂಡ್, ಹಾಂಕಾಂಗ್, ಥಾಯ್ಲೆಂಡ್, ಮಲೇಶ್ಯ, ಫಿಲಿಪ್ಪೀನ್ಸ್, ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಅಮೆರಿಕ ಮತ್ತು ಕೆನಡಗಳಿಗೆ ಎಮಿರೇಟ್ಸ್ ವಿಮಾನಗಳು ಹಾರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News