ಕ್ಷಮೆ ಕೇಳುವ ಐತಿಹಾಸಿಕ ಅವಕಾಶವನ್ನು ಅಮೆರಿಕ ಕೈಚೆಲ್ಲಿದೆ: ಇರಾನ್ ಅಧ್ಯಕ್ಷ

Update: 2020-04-01 17:01 GMT

ದುಬೈ, ಎ. 1: ನಮ್ಮ ದೇಶದ ಮೇಲೆ ವಿಧಿಸಿರುವ ದಿಗ್ಬಂಧನಗಳನ್ನು ಕೊರೋನವೈರಸ್ ಹಿನ್ನೆಲೆಯಲ್ಲಿ ತೆರವುಗೊಳಿಸುವ ಐತಿಹಾಸಿಕ ಅವಕಾಶವೊಂದನ್ನು ಅಮೆರಿಕ ಕಳೆದುಕೊಂಡಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಬುಧವಾರ ಹೇಳಿದ್ದಾರೆ.

ಅದೇ ವೇಳೆ, ಸಾಂಕ್ರಾಮಿಕದ ವಿರುದ್ಧದ ನಮ್ಮ ಹೋರಾಟಕ್ಕೆ ದಿಗ್ಬಂಧನಗಳು ಅಡ್ಡಿಯಾಗಿಲ್ಲ ಎಂದು ಅವರು ನುಡಿದರು.

‘‘ದಿಗ್ಬಂಧನಗಳನ್ನು ತೆರವುಗೊಳಿಸುವ ಅತ್ಯುತ್ತಮ ಅವಕಾಶವೊಂದನ್ನು ಅಮೆರಿಕ ಕಳೆದುಕೊಂಡಿದೆ’’ ಎಂದು ಟೆಲಿವಿಶನ್‌ನಲ್ಲಿ ಪ್ರಸಾರಗೊಂಡ ಸಚಿವ ಸಂಪುಟ ಸಭೆಯಲ್ಲಿ ಹಸನ್ ರೂಹಾನಿ ಹೇಳಿದರು.

‘‘ಅದು ಅಮೆರಿಕನ್ನರಿಗೆ ಕ್ಷಮೆ ಕೇಳುವ ಹಾಗೂ ಇರಾನ್ ಮೇಲಿನ ಅನ್ಯಾಯಯುತ ದಿಗ್ಬಂಧನಗಳನ್ನು ತೆರವುಗೊಳಿಸಲು ಅಮೆರಿಕಕ್ಕೆ ಲಭಿಸಿದ ದೊಡ್ಡ ಅವಕಾಶವಾಗಿತ್ತು’’ ಎಂದರು.

ಕೊರೋನವೈರಸ್‌ನಿಂದಾಗಿ ಇರಾನ್‌ನಲ್ಲಿ 2,898 ಮಂದಿ ಮೃತಪಟ್ಟಿದ್ದಾರೆ ಹಾಗೂ 44,606 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇರಾನ್ ಮಧ್ಯಪ್ರಾಚ್ಯದಲ್ಲಿ ಕೊರೋನವೈರಸ್‌ನಿಂದ ಅತಿ ಹೆಚ್ಚು ಹಾನಿಗೆ ಒಳಗಾದ ದೇಶವಾಗಿದೆ.

ಇರಾನ್ ಮೇಲಿನ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆ ಮತ್ತು ಚೀನಾ ಅಮೆರಿಕವನ್ನು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News