ಯುಎಇ: ಖಾಸಗಿ ಉದ್ಯೋಗಿಗಳಿಗೆ ಅವಧಿ ಪೂರ್ವ ರಜೆ ಸೌಲಭ್ಯ

Update: 2020-04-06 17:46 GMT

ಅಬುದಾಬಿ,ಎ.6: ಕೊರೋನ ವೈರಸ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಮುಂಚಿತವಾಗಿಯೇ ವರ್ಷಾವಧಿ ರಜೆಯನ್ನು ನೀಡುವ ಉಪಕ್ರಮಕ್ಕೆ ಯುಎಇ ಚಾಲನೆ ನೀಡಿದೆ.

  ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಯುಎಇ ಆಡಳಿತವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಅವಧಿಯಲ್ಲಿ ತಮ್ಮ ತಾಯ್ನಾಡಿಗೆ ಮರಳಲು ಬಯಸುವ ಖಾಸಗಿ ವಲಯದ ಉದ್ಯೋಗಿಗಳಿಗೆ ಈ ರಜಾಸೌಲಭ್ಯವನ್ನು ಒದಗಿಸಲು ಯುಎಇ ಬಯಸಿದೆ.

   ಉದ್ಯೋಗಿಗಳು ತಮ್ಮ ವಾರ್ಷಿಕ ರಜಾ ದಿನಾಂಕಗಳನ್ನು ಸಲ್ಲಿಸುವಂತೆ ಅಥವಾ ಸಂಬಳರಹಿತ ರಜೆಯನ್ನು ಪಡೆಯುವ ಬಗ್ಗೆ ಮಾಲಕರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದೆಂದು ಅದು ಹೇಳಿದೆ. ಈ ಮಧ್ಯೆ ಅವಧಿ ಮೀರಿದ ವೀಸಾಗಳನ್ನು ಹೊಂದಿರುವವರಿಗೆ ದಂಡ ವಿಧಿಸುವುದರಿಂದ ವಿನಾಯಿತಿ ನೀಡುವುದಾಗಿಯೂ ಯುಎಇಯ ಮಾನವಸಂಪನ್ಮೂಲ ಇಲಾಖೆ ತಿಳಿಸಿದೆ.

  ಈ ಮಧ್ಯೆ ಕೊರೋನ ವೈರಸ್ ಹರಡುವುದನ್ನು ತಡೆಯಲು ದುಬೈನಲ್ಲಿ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳು ನಿರ್ಜನವಾಗಿವೆ. ವಾಣಿಜ್ಯ ಕೇಂದ್ರಗಳನ್ನು ಅನಿರ್ದಿಷ್ಟಕಾಲದವರೆಗೆ ಮುಚ್ಚುಗಡೆಗೊಳಿಸಲಾಗಿದೆ. ಈ ಮಧ್ಯೆ ಸಾಲದ ಕಂತಿನ ಮರುಪಾವತಿಗೆ ಇರುವ ಕಾಲಮಿತಿಯನ್ನು ಡಿಸೆಂಬರ್ 31ರವರೆಗೆ ಯುಎಯಿ ಸೆಂಟ್ರಲ್ ಬ್ಯಾಂಕ್ ವಿಸ್ತರಿಸಿದೆ. ಯುಎಇನಲ್ಲಿ ಈವರೆಗೆ 1505 ಮಂದಿಗೆ ಕೋರೋನ ಸೋಂಕು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. 125 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News