ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳದ ದೇಶಗಳ ವಿರುದ್ಧ ಕಠಿಣ ನಿರ್ಬಂಧ ವಿಧಿಸಲಿರುವ ಯುಎಇ?
ದುಬೈ: ಕೊರೋನ ವೈರಸ್ ಬಿಕ್ಕಟ್ಟಿನ ಈ ಸಮಯದಲ್ಲಿ ಯುಎಇಯಲ್ಲಿ ಕೆಲಸ ಮಾಡುತ್ತಿರುವ ತಮ್ಮ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಮುಂದಾಗದ ದೇಶಗಳ ವಿರುದ್ಧ 'ಕಠಿಣ ನಿರ್ಬಂಧ'ಗಳನ್ನು ವಿಧಿಸಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ gulfnews.com ವರದಿ ಮಾಡಿದೆ. ಇದೇ ವೇಳೆ ಮತ್ತು ಸಹಕಾರ ಹಾಗು ಕಾರ್ಮಿಕ ಸಂಬಂಧಗಳನ್ನು ಪುನಾರಚಿಸಲು ಚಿಂತನೆ ನಡೆಸಲಾಗುವುದು ಎಂದು ಯುಎಇ ತಿಳಿಸಿರುವುದಾಗಿ ವರದಿಯಾಗಿದೆ.
ಸುಮಾರು 30 ಲಕ್ಷದಷ್ಟು ಭಾರತೀಯರು ಯುಎಇಯಲ್ಲಿದ್ದಾರೆ. ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಜನರು ಕೇರಳ ರಾಜ್ಯದವರಾಗಿದ್ದು, ನಂತರದ ಸ್ಥಾನಗಳಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶವಿದೆ.
ತಮ್ಮ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳದ ರಾಷ್ಟ್ರಗಳ ವಿರುದ್ಧದ 'ಕಠಿಣ ನಿರ್ಬಂಧಗಳಲ್ಲಿ 'ಭವಿಷ್ಯದಲ್ಲಿ ಉದ್ಯೋಗ ನೇಮಕಾತಿಯಲ್ಲಿ ಕಠಿಣ ನಿರ್ಬಂಧಗಳು' ಸೇರಿವೆ. ಇದಲ್ಲದೆ ನೇಮಕಾತಿಯಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಿಸುವ ದೇಶಗಳ ಸಚಿವಾಲಯಗಳ ನಡುವಿನ ತಿಳುವಳಿಕಾ ಪತ್ರವನ್ನು ಅಮಾನತುಗೊಳಿಸಲಾಗುವುದು ಎಂದೂ ತಿಳಿಸಲಾಗಿದೆ.