ಗಲ್ಫ್ ನಲ್ಲಿ ಕನ್ನಡಿಗರು ಲಾಕ್ ಡೌನ್: ಬಾಡಿಗೆ ವಿಮಾನ ಇಳಿಯಲು ಅನುಮತಿ ಕೊಡಿ
ಕೊರೋನ ಸೋಂಕಿನ ಸಂಕಟದಿಂದಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ತಮ್ಮ ನೆರವಿಗೆ ಬರುವಂತೆ ಕೇಂದ್ರ, ರಾಜ್ಯ ಸರಕಾರದ ಕದ ತಟ್ಟಿದ್ದಾರೆ. ಅತ್ತ ಉದ್ಯೋಗವೂ ಇಲ್ಲದೆ, ಇತ್ತ ಖರ್ಚಿಗೆ ದುಡ್ಡೂ ಇಲ್ಲದೆ ಮನೆಯವರಿಂದಲೂ ದೂರವಾಗಿರುವ ಈ ದೊಡ್ಡ ಸಂಖ್ಯೆಯ ಉದ್ಯೋಗಿಗಳು ವಿಮಾನಯಾನ ರದ್ದಾಗಿರುವುದರಿಂದ ಊರಿಗೂ ಮರಳಲಾಗದೆ ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇಂತಹದೇ ಸಂಕಷ್ಟದಲ್ಲಿ ಸಿಲುಕಿರುವ ಸೌದಿ ಅರೇಬಿಯಾದ ಜುಬೈಲ್ ನಲ್ಲಿರುವ ಮಂಗಳೂರು ಮೂಲದವರ ಪ್ರತಿಷ್ಠಿತ ಎಕ್ಸ್ಪರ್ಟೈಸ್ ಕಂಪೆನಿಯ ಸುಮಾರು 500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅವರ ಕಂಪೆನಿ ಮಾಲಕರೇ ಬಾಡಿಗೆ ವಿಮಾನಗಳ ಮೂಲಕ ಊರಿಗೆ ಕಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿ ಆ ವಿಮಾನ ಪ್ರವೇಶಕ್ಕೆ ಮತ್ತು ಲ್ಯಾಂಡಿಂಗ್ ಗೆ ಅವಕಾಶ ನೀಡಬೇಕು ಎಂದು ಕಂಪೆನಿ ಮಾಲಕರು ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಎಕ್ಸ್ಪರ್ಟೈಸ್ ಕಂಪೆನಿಯ ನಿರ್ದೇಶಕ ಶೇಖ್ ಕರ್ನಿರೆ ಅವರು "ನಮ್ಮ ಕಂಪೆನಿಯಲ್ಲಿ ವಿಶ್ವದ ಎಲ್ಲೆಡೆಯಿಂದ ಸುಮಾರು 6000 ಜನರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಭಾರತೀಯರು. ನಮ್ಮ ಕೆಲಸದ ಅಗತ್ಯಕ್ಕೆ ತಕ್ಕಂತೆ ನಾವು ಭಾರತದಿಂದ ಶಾರ್ಟ್ ಟರ್ಮ್ ವಿಸಿಟ್ ವೀಸಾ ( ಸಣ್ಣ ಅವಧಿಯ ಭೇಟಿ ವೀಸಾ) ದಲ್ಲಿ ಜನರನ್ನು ಕರೆಸುತ್ತೇವೆ. ಇವರು ವರ್ಷದ ಆರಂಭದಲ್ಲಿ ಬಂದು ಬಿಸಿಲು ಹೆಚ್ಚಾಗಿ ಕೆಲಸ ಕಡಿಮೆಯಾಗುವ ಎಪ್ರಿಲ್ ನಲ್ಲಿ ಸ್ವದೇಶಕ್ಕೆ ಮರಳುತ್ತಾರೆ. ಆ ಬಳಿಕ ಇಲ್ಲಿ ಅವರಿಗೆ ಕೆಲಸವಿರುವುದಿಲ್ಲ. ಆದ್ದರಿಂದ ಅವರನ್ನು ಇಲ್ಲಿ ಇಟ್ಟುಕೊಳ್ಳುವುದು ಆರ್ಥಿಕವಾಗಿಯೂ ಬಹಳ ಹೊರೆಯಾಗುತ್ತದೆ. ಕೊರೋನ ಸಮಸ್ಯೆಯಿಂದ ಹಠಾತ್ತನೆ ವಿಮಾನ ಸೇವೆ ಸ್ಥಗಿತವಾಗಿದ್ದರಿಂದ ಇಂತಹ 250 ಜನರು ನಮ್ಮಲ್ಲಿ ಭಾರತಕ್ಕೆ ಮರಳಲಾಗದೆ ಸಿಲುಕಿಕೊಂಡಿದ್ದಾರೆ. ಹಾಗೆಯೇ ನಮ್ಮ ಪೂರ್ಣಕಾಲಿಕ ಉದ್ಯೋಗಿಗಳಲ್ಲೂ ತುರ್ತು ಕಾರಣಗಳಿಗಾಗಿ ಸ್ವದೇಶಕ್ಕೆ ಹೋಗಲೇ ಬೇಕಾದ ಸುಮಾರು 250 ಮಂದಿಯಿದ್ದಾರೆ. ಇವರು ಆರೋಗ್ಯ ಸಮಸ್ಯೆ ಇತ್ಯಾದಿ ತೀರಾ ತುರ್ತು ಕಾರಣಗಳಿಗಾಗಿ ಹೋಗಲೇಬೇಕಿದೆ. ಇವರೆಲ್ಲರೂ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದು ತೀವ್ರ ದುಃಖದಲ್ಲಿದ್ದಾರೆ. ಇದಕ್ಕಾಗಿ ಪರಿಸ್ಥಿತಿ ನಿಯಂತ್ರಣ ಮೀರುವ ಮೊದಲು ನಾವು ಸೌದಿ ಸರಕಾರದ ಜೊತೆ ಮಾತನಾಡಿ ಬಾಡಿಗೆ ವಿಮಾನಗಳ ಮೂಲಕ ಈ 500 ಮಂದಿಯನ್ನು ಹಂತಹಂತವಾಗಿ ಭಾರತಕ್ಕೆ ಕಳಿಸಲು ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೆ ಬಾಡಿಗೆ ವಿಮಾನ ಒದಗಿಸಲು ಸೌದಿ ಸರಕಾರ ಸಿದ್ಧವಿದೆ. ಈ ವಿಮಾನಗಳಿಗೆ ಭಾರತಕ್ಕೆ ಪ್ರವೇಶ ಹಾಗು ಬೆಂಗಳೂರು ಅಥವಾ ಮಂಗಳೂರಿನಲ್ಲಿ ಇಳಿಯಲು ಅವಕಾಶ ಒದಗಿಸಿಕೊಡಬೇಕು" ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.
ಸುರಕ್ಷತೆಯನ್ನು ಖಾತ್ರಿಪಡಿಸಲು ಹೀಗೆ ಪ್ರಯಾಣಿಸುವ ಎಲ್ಲರನ್ನು ಪ್ರಯಾಣಕ್ಕೆ 48 ಗಂಟೆಗಳ ಮೊದಲು ಸೌದಿಯ ಅಧಿಕೃತ ಅರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿ ಕೊರೋನ ನೆಗೆಟಿವ್ ಇರುವುದನ್ನು ಖಚಿತಪಡಿಸುತ್ತೇವೆ. ಎಲ್ಲ ಪ್ರಯಾಣಿಕರು ಮಾಸ್ಕ್, ಕೈಗವಸು ಧರಿಸಿರುತ್ತಾರೆ ಮತ್ತು ಸ್ಯಾನಿಟೈಸರ್ ಗಳನ್ನು ಆಗಾಗ ಬಳಸುತ್ತಿರುತ್ತಾರೆ. ಇವರೆಲ್ಲರೂ ಭಾರತದಲ್ಲಿ ಇಳಿದ ಕೂಡಲೇ ಮೊದಲೇ ನಿಗದಿಪಡಿಸಿದ ಸ್ಥಳದಲ್ಲಿ ಸರಕಾರದ ನಿಯಮಾವಳಿಯಂತೆ ನಮ್ಮದೇ ಖರ್ಚಿನಲ್ಲಿ ಕ್ವಾರಂಟೈನ್ ಅವಧಿ ಮುಗಿಸುತ್ತಾರೆ. ಇದರ ಜೊತೆ ಎಲ್ಲ ಇತರ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ಶೇಖ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.