ಬಿ.ಆರ್. ಶೆಟ್ಟಿ ಸಹಿತ 6 ಮಂದಿಯ ವಿರುದ್ಧ ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್

Update: 2020-04-16 15:07 GMT
Photo: Khaleej Times

ಅಬುಧಾಬಿ (ಯುಎಇ), ಎ. 16: ಯುಎಇಯಾದ್ಯಂತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿರುವ ಎನ್‌ಎಂಸಿ ಹೆಲ್ತ್‌ಕೇರ್ ಕಂಪೆನಿಗೆ 3 ಬಿಲಿಯ ದಿರ್ಹಮ್ (ಸುಮಾರು 6,200 ಕೋಟಿ ರೂಪಾಯಿ) ಸಾಲ ನೀಡಿರುವ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ (ಎಡಿಸಿಬಿ), ಕಂಪೆನಿಯ ಸ್ಥಾಪಕ ಬಿ. ಆರ್. ಶೆಟ್ಟಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಮಂಘಟ್ ಸೇರಿದಂತೆ ಆರು ಮಂದಿಯ ವಿರುದ್ಧ ‘ವಂಚನೆ’ ದೂರು ಸಲ್ಲಿಸಿದೆ.

ಆರು ಮಂದಿಯ ವಿರುದ್ಧ ‘ವಂಚನೆ ನಡೆಸಿದ್ದಾರೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ದೂರು ಸಲ್ಲಿಸಿರುವುದನ್ನು ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ಬ್ಯಾಂಕ್ ಖಚಿತಪಡಿಸಿದೆ. ಆದರೆ, ಆರೋಪಿಗಳ ಹೆಸರನ್ನು ಅದು ಬಹಿರಂಗಪಡಿಸಿಲ್ಲ.

 ಆದರೆ, ದೂರಿನ ಪ್ರತಿಯೊಂದನ್ನು 'Khaleej Times' ಪಡೆದುಕೊಂಡಿದ್ದು, ಅದರಲ್ಲಿ ಎಲ್ಲ ಆರೋಪಿಗಳ ವಿವರಗಳಿವೆ. ಬಿ.ಆರ್. ಶೆಟ್ಟಿ ಮತ್ತು ಮಂಘಟ್‌ರನ್ನು ಹೊರತುಪಡಿಸಿ, ಇತರ ಆರೋಪಿಗಳನ್ನು ಸುರೇಶ್ ಕುಮಾರ್, ಪ್ರಶಾಂತ್ ಶೆಣೈ, ಸಈದ್ ಮೊಹಮ್ಮದ್ ಅಲ್ ಖಬಾಯಿಸ್ ಮತ್ತು ಖಲೀಫ ಬುಟ್ಟಿ ಉಮೈರ್ ಯೂಸುಫ್ ಎಂಬುದಾಗಿ ಗುರುತಿಸಲಾಗಿದೆ.

ನಮ್ಮ ಪರವಾಗಿ, ನಮ್ಮ ಸಹ ಸಂಸ್ಥೆ ಅಲ್ ಹಿಲಾಲ್ ಬ್ಯಾಂಕ್ ಪರವಾಗಿ ಮತ್ತು ನಾವು ವಹಿಸಿಕೊಂಡಿರುವ ಯುನೈಟೆಡ್ ನ್ಯಾಶನಲ್ ಬ್ಯಾಂಕ್ ಪರವಾಗಿ ದೂರು ಸಲ್ಲಿಸಿರುವುದಾಗಿ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ತಿಳಿಸಿದೆ. ಆರೋಪಿಗಳು ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಹಾಗೂ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘‘ಆರೋಪಿಗಳು ಪರಸ್ಪರ ಶಾಮೀಲಾಗಿ ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಹಾಗೂ ಈ ನಕಲಿ ದಾಖಲೆಗಳ ಮೂಲಕ ಎನ್‌ಎಂಸಿ ಗ್ರೂಪ್‌ನ ಒಟ್ಟು ಸಾಲಗಳ ಬಗ್ಗೆ ತಪ್ಪು ವಿವರಗಳನ್ನು ಉದ್ದೇಶಪೂರ್ವಕವಾಗಿ ನೀಡಿದ್ದಾರೆ’’ ಎಂದು ದೂರಿನಲ್ಲಿ ಹೇಳಲಾಗಿದೆ.

 ‘‘ಅದೂ ಅಲ್ಲದೆ, ಆರೋಪಿಗಳು ತಮ್ಮ ಕಂಪೆನಿಯ ಕುರಿತ ತಪ್ಪು ಮೌಲ್ಯಮಾಪನಗಳನ್ನು ಎಡಿಸಿಬಿ ಮತ್ತು ಅದರ ಸಹ ಸಂಸ್ಥೆಗಳಿಗೆ ಸಲ್ಲಿಸಿದ್ದಾರೆ ಹಾಗೂ ತಮ್ಮ ಸಾಮರ್ಥ್ಯವನ್ನು ತಪ್ಪಾಗಿ ಬಿಂಬಿಸಿದ್ದಾರೆ. ಆ ಮೂಲಕ ದೂರುದಾರ ಸಂಸ್ಥೆಯು ಸಾಲಗಳನ್ನು ನೀಡುವಂತೆ ಮಾಡಿದ್ದಾರೆ ಹಾಗೂ ದೂರುದಾರ ಸಂಸ್ಥೆಯನ್ನು ವಂಚಿಸಿದ್ದಾರೆ’’ ಎಂದು ಬ್ಯಾಂಕ್ ತನ್ನ ದೂರಿನಲ್ಲಿ ಆರೋಪಿಸಿದೆ.

ಸಂಪೂರ್ಣ ಸತ್ಯವನ್ನು ಶೀಘ್ರವೇ ಜನರ ಮುಂದಿಡುವೆ: ಬಿ.ಆರ್. ಶೆಟ್ಟಿ

‘‘ನಾನು ಸಾಲ ನೀಡುವ ಎಲ್ಲ ಬ್ಯಾಂಕ್‌ಗಳೊಂದಿಗೆ ದಶಕಗಳಿಂದ ಕೆಲಸ ಮಾಡಿದ್ದೇನೆ. ಅವರು ನನ್ನ ಪ್ರಮುಖ ಭಾಗೀದಾರರಾಗಿದ್ದಾರೆ. ಅದರಿಂದಾಗಿಯೇ ಯುಎಇಯಲ್ಲಿ ನನ್ನ ಉದ್ಯಮ ಆರಂಭಿಸಲು ಸಾಧ್ಯವಾಗಿದೆ’’ ಎಂದು ಈಗ ಭಾರತದಲ್ಲಿರುವ ಬಿ.ಆರ್. ಶೆಟ್ಟಿ 'Khaleej Times' ಗೆ ಹೇಳಿದ್ದಾರೆ.

  ‘‘ನಾನು ಕಳೆದ ವಾರ ಹೇಳಿರುವಂತೆ, ನನ್ನದೇ ಆದ ಕಾನೂನು ಮತ್ತು ವಿಧಿವಿಜ್ಞಾನ ತನಿಖೆಗಳಿಂದ ಕೆಲವು ಅಂಶಗಳು ಹೊರಬಂದಿವೆ. ನನ್ನ ವಿರುದ್ಧ ಮಾಡಲಾಗಿರುವ ಕೆಲವು ತಪ್ಪು ಆರೋಪಗಳ ವಿಷಯದಲ್ಲಿ, ಯುಎಇ ಮತ್ತು ಇತರೆಡೆಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ನಾನು ಕಳೆದ ವಾರವೇ ಹೇಳಿರುವಂತೆ, ಏನು ನಡೆದಿದೆ ಎಂಬ ಬಗ್ಗೆ ಸಾಧ್ಯವಾದಷ್ಟು ಬೇಗ ನಾನು ಸಂಪೂರ್ಣ ಸತ್ಯವನ್ನು ಮತ್ತು ಎಲ್ಲ ವಾಸ್ತವಾಂಶಗಳನ್ನು ಜನರ ಮುಂದಿಡಲು ನಾನು ದೃಢ ನಿರ್ಧಾರ ಮಾಡಿದ್ದೇನೆ’’ ಎಂದು ಅವರು ನುಡಿದರು.

ಕಂಪೆನಿಯ ಮೌಲ್ಯ 18,450 ಕೋಟಿ ರೂ.; ಸಾಲ 50,750 ಕೋಟಿ ರೂ.

ಎನ್‌ಎಮ್‌ಸಿ ಹೆಲ್ತ್ ಕಂಪೆನಿಯ ಒಟ್ಟು ಮಾರುಕಟ್ಟೆ ಮೌಲ್ಯ 2.4 ಬಿಲಿಯ ಡಾಲರ್ (ಸುಮಾರು 18,450 ಕೋಟಿ ರೂಪಾಯಿ) ಹಾಗೂ ಅದು ಹೊಂದಿರುವ ಒಟ್ಟು ಸಾಲ 6.6 ಬಿಲಿಯ ಡಾಲರ್ (ಸುಮಾರು 50,750 ಕೋಟಿ ರೂಪಾಯಿ).

 2019 ಡಿಸೆಂಬರ್‌ನಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ‘ಮಡ್ಡಿ ವಾಟರ್ಸ್’ ಎನ್‌ಎಮ್‌ಸಿ ಕಂಪೆನಿಯ ಆರ್ಥಿಕ ಅವ್ಯವಹಾರಗಳನ್ನು ಪ್ರಶ್ನಿಸಿದ ಬಳಿಕ, ಕಂಪೆನಿಯ ಶೇರು ಮೌಲ್ಯವು 70 ಶೇಕಡಕ್ಕೂ ಅಧಿಕದಷ್ಟು ಕಡಿಮೆಯಾಗಿದೆ.

ಎನ್‌ಎಮ್‌ಸಿ ಹೆಲ್ತ್ ಕಂಪೆನಿಗೆ 80ಕ್ಕೂ ಅಧಿಕ ಸ್ಥಳೀಯ, ಪ್ರಾದೇಶಿಕ ಮತ್ತು ಅಂತರ್‌ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ನೀಡಿವೆ. ಯುಎಇಯ ಬ್ಯಾಂಕ್‌ಗಳು ಕಂಪೆನಿಗೆ ಸುಮಾರು 10 ಬಿಲಿಯ ದಿರ್ಹಮ್ (ಸುಮಾರು 20,900 ಕೋಟಿ ರೂಪಾಯಿ) ಸಾಲ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News