×
Ad

ಸಮಸ್ಯೆಗೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಕರೆತರಲು ಕೆ.ಎನ್.ಆರ್.ಐ. ಫೋರಂನಿಂದ ಕರ್ನಾಟಕ ಸಿಎಂಗೆ ಮನವಿ

Update: 2020-04-17 10:59 IST
ಸಾಂದರ್ಭಿಕ  ಚಿತ್ರ

ದಮ್ಮಾಮ್, ಎ.17: ಸೌದಿ ಅರೇಬಿಯಾದಲ್ಲಿ‌ ಸಂಕಷ್ಟಕ್ಕೆ ಸಿಲುಕಿರುವ  ಅನಿವಾಸಿ ಕನ್ನಡಿಗರನ್ನು ತವರಿಗೆ ಕರೆಸಿಕೊಳ್ಳಲು ಕರ್ನಾಟಕ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಅನಿವಾಸಿ ಸಂಘಟನೆಗಳ ಒಕ್ಕೂಟ ಕೆ.ಎನ್.ಆರ್.ಐ ಫೋರಂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಸೌದಿಯ ವಿವಿಧ ಶಿಬಿರಗಳಲ್ಲಿ ವಾಸಿಸುತ್ತಿರುವವರು, ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ತವರಿಗೆ ಮರಳಲು ಸಿದ್ಧರಾದವರು, ಉದ್ಯೋಗ ಕಳೆದುಕೊಂಡವರು, ವಿಸಿಟ್ ವಿಸಾದಲ್ಲಿ ಬಂದು ಸಿಲುಕಿಕೊಂಡವರು, ಅನಿವಾಸಿ ಕ‌ನ್ನಡಿಗ ಉದ್ಯಮಿಗಳು, ಕಾರ್ಮಿಕರು, ಸಣ್ಣ ಕೈಗಾರಿಕೆಗಳು,  ವ್ಯಾಪಾರಿಗಳು ಮತ್ತು ಕಮಿಶ‌‌ನ್‌ ಆಧರಿತವಾಗಿ‌ ಕೆಲಸ ಮಾಡುತ್ತಿರುವ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ‌.

ಲಾಕ್ ಡೌನ್ ನಿಂದ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸುವುದಕ್ಕಾಗಿ ಕಂಪೆನಿಗಳು ಸಿಬ್ಬಂದಿಯನ್ನು ವೇತನರಹಿತ ರಜೆಯಲ್ಲಿ ಕಳುಹಿಸುತ್ತಿವೆ. ಗಂಟೆಯ ಆಧಾರದಲ್ಲಿ‌ ವೇತನ ಪಡೆಯುವವರ ಕೆಲಸದ ಅವಧಿಯನ್ನು‌ ಕಡಿತಗೊಳಿಸುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ಚಿಕಿತ್ಸೆಗಾಗಿ ನಿಯಮಿತವಾಗಿ ತಾಯ್ನಾಡಿಗೆ ಹೋಗುವವರಿದ್ದಾರೆ. ಹೆರಿಗೆಗಾಗಿ ತಾಯ್ನಾಡಿಗೆ ತೆರಳಲು ಹೊರಟು ನಿಂತವರಿದ್ದಾರೆ. ವಿಸಿಟಿಂಗ್ ವಿಸಾದಲ್ಲಿ ಕುಟುಂಬವನ್ನು ಕರೆ ತಂದು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವವರಿದ್ದಾರೆ. ಇವರ ಸಮಸ್ಯೆಗಳನ್ನು ಪರಿಗಣಿಸಿ ಅವರನ್ನು ತಾಯ್ನಾಡಿಗೆ ಕರೆಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಸೌದಿ ಸರಕಾರದ ತೈಲ ಸಂಸ್ಕರಣಾ ಯೋಜನೆಗಳನ್ನು ಆಧರಿಸಿ ಉದ್ಯಮ ನಡೆಸುವ ಅನಿವಾಸಿ ಕನ್ನಡಿಗ ಉದ್ಯಮಿಗಳಿದ್ದು, ತಾತ್ಕಾಲಿಕವಾಗಿ ಸಾವಿರಾರು ಕಾರ್ಮಿಕರು ಮತ್ತು‌ ಸಿಬ್ಬಂದಿಯನ್ನು ಭಾರತದಿಂದ ಕರೆತಂದವರಿದ್ದಾರೆ. ಯೋಜನೆಗಳು ತಾತ್ಕಾಲಿಕವಾಗಿ ಅನಿರ್ದಿಷ್ಟಾವಧಿಗೆ ನಿಂತಿರುವುದರಿಂದ  ಈ ಕಾರ್ಮಿಕರಿಗೆ ಊಟ ವಸತಿ ಕಲ್ಪಿಸುವುದು ಅವರಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟುಮಾಡಲಿದೆ. ಸಣ್ಣ ಕೈಗಾರಿಕೆಗಳು ತಾತ್ಕಾಲಿಕವಾಗಿ ಮುಚ್ಚಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಮನಗಂಡು ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಮತ್ತು  ಊರಿಗೆ ಮರಳಲು ಇಚ್ಚಿಸುವವರನ್ನು  ಕರೆತರಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕೆ.ಎನ್.ಆರ್.ಐ ಫೋರಂ ಸರಕಾರವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News