“ನಾನು ಯುಎಇಗೆ ಮರಳುವೆ”: ಮೌನ ಮುರಿದ ಬಿ.ಆರ್. ಶೆಟ್ಟಿ ಹೇಳಿದ್ದೇನು?

Update: 2020-04-18 15:05 GMT

ದುಬೈ, ಎ. 18: “ನಾನು ವೈಯಕ್ತಿಕ ಕಾರಣಗಳಿಗಾಗಿ ಫೆಬ್ರವರಿ ತಿಂಗಳ ಆದಿ ಭಾಗದಲ್ಲಿ ಭಾರತಕ್ಕೆ ಮರಳಿದೆ” ಎಂದು ಯುಎಇಯಾದ್ಯಂತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿರುವ ‘ಎನ್‌ಎಮ್‌ಸಿ ಹೆಲ್ತ್’ ಕಂಪೆನಿಯ ಸ್ಥಾಪಕ ಬಿ.ಆರ್. ಶೆಟ್ಟಿ ಯುಎಇಯ ಪತ್ರಿಕೆ thenational.ae ಗೆ ಹೇಳಿದ್ದಾರೆ.

ಹಲವು ಅವ್ಯವಹಾರ ಆರೋಪಗಳನ್ನು ಎದುರಿಸುತ್ತಿರುವ ಎನ್‌ಎಮ್‌ಸಿ ಹೆಲ್ತ್ ಕಂಪೆನಿಗೆ ಕಳೆದ ವಾರ ಬ್ರಿಟನ್‌ನ ನ್ಯಾಯಾಲಯವೊಂದು ಆಡಳಿತಾಧಿಕಾರಿಯನ್ನು ನೇಮಿಸಿದೆ ಹಾಗೂ ಅಬುಧಾಬಿಯ ಬ್ಯಾಂಕೊಂದು ಬಿ.ಆರ್. ಶೆಟ್ಟಿ ಹಾಗೂ ಕಂಪೆನಿಗೆ ಸಂಬಂಧಿಸಿದ ಇತರ ಐವರ ವಿರುದ್ಧ ವಂಚನೆ ದೂರು ಸಲ್ಲಿಸಿದೆ.

“ನಾನು ನನ್ನ ಸಹೋದರನನ್ನು ನೋಡುವುದಕ್ಕಾಗಿ ಫೆಬ್ರವರಿ 7ರಂದು ಯುಎಇಯಿಂದ ಮಂಗಳೂರಿಗೆ ಹೊರಟೆ” ಎಂದು ‘ದ ನ್ಯಾಶನಲ್’ನೊಂದಿಗೆ ಫೋನ್‌ನಲ್ಲಿ ಮಾತನಾಡಿದ ಶೆಟ್ಟಿ ಹೇಳಿದ್ದಾರೆ. “ನನ್ನ 82 ವರ್ಷದ ಸಹೋದರ ಕ್ಯಾನ್ಸರ್‌ ಪೀಡಿತರಾಗಿದ್ದು ಈ ತಿಂಗಳ ಆದಿ ಭಾಗದಲ್ಲಿ ನಿಧನರಾಗಿದ್ದಾರೆ” ಎಂದವರು ತಿಳಿಸಿದ್ದಾರೆ.

‘‘ಅವರು ಎರಡು ತಿಂಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಹಾಗಾಗಿ ನಾನು ಫೆಬ್ರವರಿಯಲ್ಲಿ ಬಂದೆ. ಅವರು 15 ದಿನದ ಹಿಂದೆ ನಿಧನರಾದರು’’ ಎಂದು ಶೆಟ್ಟಿ ತಿಳಿಸಿದರು.

‘‘ಕೊರೋನವೈರಸ್ ಹಿನ್ನೆಲೆಯಲ್ಲಿ ಚಲನವಲನಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳು ತೆರವುಗೊಂಡ ಬಳಿಕ ಹಾಗೂ ವಿಮಾನಗಳು ಸಂಚಾರ ಆರಂಭಿಸಿದ ಬಳಿಕ ನಾನು ಯುಎಇಗೆ ಬರುವೆ’’ ಎಂದರು. “ನಾನು ಮಂಗಳೂರಿನಲ್ಲಿ ನನ್ನ ಪತ್ನಿ ಜೊತೆಗೆ ಇದ್ದೇನೆ, ಉಳಿದ ನನ್ನ ಕುಟುಂಬ ಸದಸ್ಯರು ಅಬುಧಾಬಿಯಲ್ಲೇ ಇದ್ದಾರೆ” ಎಂದು ಶೆಟ್ಟಿ ತಿಳಿಸಿದರು ಎಂದು ‘ದ ನ್ಯಾಶನಲ್’ ವರದಿ ಮಾಡಿದೆ.

 ತನ್ನ ಕಂಪೆನಿಗಳಾದ ಎನ್‌ಎಮ್‌ಸಿ ಹೆಲ್ತ್ ಮತ್ತು ಫಿನಬ್ಲರ್‌ಗಳಿಗೆ ಸಂಬಂಧಿಸಿ ಕಾನೂನು ಸವಾಲುಗಳು ತಲೆದೋರಿದ ಬಳಿಕ ಶೆಟ್ಟಿ ಭಾರತಕ್ಕೆ ಪರಾರಿಯಾದರು ಎಂದು ಹಲವು ವರದಿಗಳು ಆರೋಪಿಸಿದ್ದವು. ಈ ಎರಡೂ ಕಂಪೆನಿಗಳು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಾಯಿಸಲ್ಪಟ್ಟಿವೆ.

ವಾಸ್ತವಾಂಶಗಳು ಗೊತ್ತಿರಲಿಲ್ಲ; ಪ್ರತಿಕ್ರಿಯಿಸಲು ತಡವಾಯಿತು: ಶೆಟ್ಟಿ

“ನಾನು ಮತ್ತು ನನ್ನ ಕಂಪೆನಿಗಳು ಎದುರಿಸುತ್ತಿರುವ ಆರೋಪಗಳ ಬಗ್ಗೆ ನಾನು ಯಾಕೆ ಮೌನವಾಗಿದ್ದೆ ಮತ್ತು ಯಾಕೆ ಪ್ರತಿಕ್ರಿಯಿಸಲು ಇಷ್ಟಪಡಲಿಲ್ಲ ಎಂದರೆ, ನನಗೆ ವಾಸ್ತವಾಂಶಗಳು ಗೊತ್ತಿರಲಿಲ್ಲ ಹಾಗೂ ಏನಾಗಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ’’ ಎಂದು ಶೆಟ್ಟಿ ‘ದ ನ್ಯಾಶನಲ್’ಗೆ ಹೇಳಿದ್ದಾರೆ.

ಈಗ ಕೆಲವು ಮಾಹಿತಿಗಳು ಹೊರಬರಲಾರಂಭಿಸಿವೆ ಹಾಗೂ ನನ್ನ ವಿರುದ್ಧ ಮಾಡಲಾಗಿರುವ ಕೆಲವು ತಪ್ಪುದಾರಿಗೆಳೆಯುವ ಸುಳ್ಳು ಆರೋಪಗಳಿಗೆ ಸಂಬಂಧಿಸಿ ಯುಎಇ ಹಾಗೂ ಇತರೆಡೆಗಳಲ್ಲಿರುವ ಸೂಕ್ತ ಪ್ರಾಧಿಕಾರಗಳಿಗೆ ಸರಿಯಾದ ರೀತಿಯಲ್ಲಿ ವಿವರಣೆ ನೀಡುವುದನ್ನು ಎದುರು ನೋಡುತ್ತಿದ್ದೇನೆ. ಎಲ್ಲ ವಿಷಯಗಳು ಮತ್ತು ಸತ್ಯಗಳನ್ನು ಬೆಳಕಿಗೆ ತರಲು ನಾನು ದೃಢ ನಿರ್ಧಾರ ಮಾಡಿದ್ದೇನೆ. ಏನು ನಡೆಯಿತು ಎಂಬುದನ್ನು ಸಾಧ್ಯವಿದ್ದಷ್ಟು ಬೇಗ ಜನರ ಮುಂದಿಡುತ್ತೇನೆ’’ ಎಂದು ‘ದ ನ್ಯಾಶನಲ್’ಗೆ ಕಳುಹಿಸಿದ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.

ಎನ್‌ಎಮ್‌ಸಿ ಹೆಲ್ತ್‌ಗೆ ಆಡಳಿತಗಾರನನ್ನು ನೇಮಿಸಿದ ಬ್ರಿಟನ್ ಬ್ಯಾಂಕ್

ಎನ್‌ಎಮ್‌ಸಿ ಹೆಲ್ತ್‌ಗೆ ಸಂಬಂಧಿಸಿ ಬಿ.ಆರ್. ಶೆಟ್ಟಿ ಸೇರಿಂತೆ ಹಲವು ಮಂದಿಯ ವಿರುದ್ಧ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್, ಅಬುಧಾಬಿ ಅಟಾರ್ನಿ ಜನರಲ್‌ಗೆ ಕ್ರಿಮಿನಲ್ ದೂರು ಸಲ್ಲಿಸಿದೆ.

‘‘ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಬ್ಯಾಂಕ್‌ನ ಗುರಿಗೆ ಪೂರಕವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಬ್ಯಾಂಕ್ ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಬುಧಾಬಿ ಕಮರ್ಶಿಯಲ್ ಬ್ಯಾಂಕ್, ಎನ್‌ಎಮ್‌ಸಿ ಹೆಲ್ತ್‌ಗೆ 981 ಮಿಲಿಯ ಡಾಲರ್ (ಸುಮಾರು 7,500 ಕೋಟಿ ರೂಪಾಯಿ) ಸಾಲ ನೀಡಿದೆ ಹಾಗೂ ಅದು ಇನ್ನಷ್ಟೇ ವಸೂಲಾಗಬೇಕಿದೆ. ಅಬುಧಾಬಿ ಕಮರ್ಶಿಯಲ್ ಬ್ಯಾಂಕ್, ಎನ್‌ಎಮ್‌ಸಿ ಹೆಲ್ತ್‌ಗೆ ಅತಿ ಹೆಚ್ಚು ಸಾಲ ನೀಡಿದ ಬ್ಯಾಂಕ್ ಆಗಿದೆ.

ಅಬುಧಾಬಿ ಕಮರ್ಶಿಯಲ್ ಬ್ಯಾಂಕ್‌ನ ದೂರನ್ನು ಆಧರಿಸಿ, ಬ್ರಿಟನ್‌ನ ನ್ಯಾಯಾಲಯವೊಂದು ಕಳೆದ ವಾರ ಎನ್‌ಎಮ್‌ಸಿ ಹೆಲ್ತ್ ಕಂಪೆನಿಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ ಎಂದು ‘ದ ನ್ಯಾಶನಲ್’ ವರದಿ ಮಾಡಿದೆ.

ಯುಎಇ ಬ್ಯಾಂಕ್‌ಗಳಿಂದ 8 ಬಿಲಿಯ ದಿರ್ಹಮ್ ಸಾಲ

ಬಿ.ಆರ್. ಶೆಟ್ಟಿ ಒಡೆತನದ ಎನ್‌ಎಮ್‌ಸಿ ಹೆಲ್ತ್‌ಗೆ ಯುಎಇಯ ಬ್ಯಾಂಕ್‌ಗಳು ಒಟ್ಟು 8 ಬಿಲಿಯ ದಿರ್ಹಮ್ (ಸುಮಾರು 16,660 ಕೋಟಿ ರೂಪಾಯಿ) ಸಾಲ ನೀಡಿವೆ. ಶೆಟ್ಟಿಯ ಕಂಪೆನಿಗೆ ಸಾಲ ನೀಡಿರುವ ಇತರ ಬ್ಯಾಂಕ್‌ಗಳೆಂದರೆ ಅಬುಧಾಬಿ ಇಸ್ಲಾಮಿಕ್ ಬ್ಯಾಂಕ್, ದುಬೈ ಇಸ್ಲಾಮಿಕ್ ಬ್ಯಾಂಕ್, ಬಾರ್ಕ್‌ಲೇಸ್ ಮತ್ತು ಸ್ಟಾಂಡರ್ಡ್ ಚಾರ್ಟರ್ಡ್.

ಒಮಾನ್‌ನ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದಲೂ ಎನ್‌ಎಂಸಿ ಸಾಲಗಳನ್ನು ಪಡೆದುಕೊಂಡಿದೆ.

ಕಂಪೆನಿಗೆ 80ಕ್ಕೂ ಅಧಿಕ ಸ್ಥಳೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಾಲ ನೀಡಿವೆ.

1975ರಲ್ಲಿ ಎನ್‌ಎಮ್‌ಸಿ ಸ್ಥಾಪನೆ

ಎನ್‌ಎಮ್‌ಸಿ ಹೆಲ್ತ್ ಕಂಪೆನಿಯನ್ನು ಬಿ.ಆರ್. ಶೆಟ್ಟಿ 1975ರಲ್ಲಿ ಅಬುಧಾಬಿಯಲ್ಲಿ ಸ್ಥಾಪಿಸಿದರು. ಹತ್ತೊಂಬತ್ತು ದೇಶಗಳಲ್ಲಿರುವ ಕಂಪೆನಿಯ ಶಾಖೆಗಳಲ್ಲಿ ಈಗ 2,000ಕ್ಕೂ ಅಧಿಕ ವೈದ್ಯರು ಮತ್ತು ಸುಮಾರು 20,000 ಇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕಂಪೆನಿಯ ಉಸ್ತುವಾರಿಯನ್ನು ಈಗ ಆಡಳಿತಾಧಿಕಾರಿ ನೋಡಿಕೊಳ್ಳುತ್ತಿದ್ದಾರೆ.

ಎಚ್ಚರಿಕೆ ನೀಡಿದ್ದ ‘ಮಡ್ಡಿ ವಾಟರ್ಸ್’

ಹೂಡಿಕೆದಾರ ಸಂಸ್ಥೆ ಮಡ್ಡಿ ವಾಟರ್ಸ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಎನ್‌ಎಮ್‌ಸಿ ಹೆಲ್ತ್ ಕಂಪೆನಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳನ್ನು ಬಯಲು ಮಾಡಿತ್ತು. ಕಂಪೆನಿಯು ನಗದು ಹಣವನ್ನು ಹೆಚ್ಚಾಗಿ ತೋರಿಸಿದೆ, ಸೊತ್ತುಗಳಿಗೆ ಹೆಚ್ಚಿನ ಹಣ ಪಾವತಿಸಿದೆ ಹಾಗೂ ಕಡಿಮೆ ಸಾಲವನ್ನು ತೋರಿಸಿದೆ ಎಂದು ಮಡ್ಡಿ ವಾಟರ್ಸ್ ಆರೋಪಿಸಿದೆ.

ಅದರ ಬಳಿಕ, ಕಂಪೆನಿಯು ಕಳೆದ ಹಲವು ತಿಂಗಳುಗಳಲ್ಲಿ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ.

ತನ್ನ ಸಾಲದ ಪ್ರಮಾಣ 6.6 ಬಿಲಿಯ ಡಾಲರ್ (ಸುಮಾರು 50,500 ಕೋಟಿ ರೂಪಾಯಿ) ಎಂಬುದಾಗಿ ಅದು ಕಳೆದ ತಿಂಗಳು ಬಹಿರಂಗಪಡಿಸಿದೆ. ಇದು ಹಿಂದಿನ ಬಾರಿ ಅದು ತೋರಿಸಿದ 2.1 ಬಿಲಿಯ ಡಾಲರ್ (ಸುಮಾರು 16,000 ಕೋಟಿ ರೂಪಾಯಿ)ಗಿಂತ ಗಣನೀಯ ಪ್ರಮಾಣದಲ್ಲಿ ಅಧಿಕವಾಗಿದೆ.

ಕಂಪೆನಿಯು ಶಂಕಿತ ‘ವಂಚನಾ ನಡವಳಿಕೆ’ಯನ್ನು ತೋರಿಸಿದೆ ಎನ್ನುವುದನ್ನೂ ಪರಿಶೀಲನಾ ಸಮಿತಿಯೊಂದು ಪತ್ತೆಹಚ್ಚಿದೆ ಎಂದು ‘ದ ನ್ಯಾಶನಲ್’ ವರದಿ ಮಾಡಿದೆ.

ಬ್ರಿಟನ್ ಪ್ರಾಧಿಕಾರದಿಂದ ತನಿಖೆ

ಲಂಡನ್ ಶೇರು ವಿನಿಮಯ ಕೇಂದ್ರದಲ್ಲಿ ವ್ಯವಹರಿಸುವುದರಿಂದ ಎನ್‌ಎಮ್‌ಸಿ ಹೆಲ್ತ್ ಕಂಪೆನಿಯ ಶೇರುಗಳನ್ನು ತಡೆದ ಬಳಿಕ, ಬ್ರಿಟನ್‌ನ ಆರ್ಥಿಕ ತನಿಖೆ ಪ್ರಾಧಿಕಾರವು ಕಂಪೆನಿಯ ಚಟುವಟಿಕೆಗಳ ಬಗ್ಗೆ ತನಿಖೆ ಫೆಬ್ರವರಿಯಲ್ಲಿ ತನಿಖೆ ನಡೆಸಿದೆ.

ನೂತನ ಕಾರ್ಯಕಾರಿ ಅಧ್ಯಕ್ಷ ನೇಮಕ

ದುಬೈಯ ಖಾಸಗಿ ಹಣಕಾಸು ಸಂಸ್ಥೆ ಇತ್ಮಾರ್ ಕ್ಯಾಪಿಟಲ್‌ನ ಆಡಳಿತ ಪಾಲುದಾರ ಫೈಸಲ್ ಬೆಲ್ಹೂಲ್‌ರನ್ನು ಎನ್‌ಎಮ್‌ಸಿ ಹೆಲ್ತ್ ಮಾರ್ಚ್ 26ರಂದು ತನ್ನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ಅದಕ್ಕೂ ಮೊದಲು ಇತ್ಮಾರ್ ಕ್ಯಾಪಿಟಲ್, ಎನ್‌ಎಮ್‌ಸಿಯ 9 ಶೇಕಡ ಪಾಲನ್ನು ಖರೀದಿಸಿತ್ತು.

ರಾಜೀನಾಮೆ ನೀಡಿದ ಶೆಟ್ಟಿ

ಬಿ.ಆರ್. ಶೆಟ್ಟಿ ಎನ್‌ಎಮ್‌ಸಿ ಅಧ್ಯಕ್ಷ ಹುದ್ದೆಗೆ ಫೆಬ್ರವರಿಯಲ್ಲಿ ಹಾಗೂ ಫಿನಬ್ಲರ್‌ಗೆ ಸೇರಿದ ಟ್ರಾವೆಲೆಕ್ಸ್ ಮಂಡಳಿಗೆ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದಾರೆ.

‘ಫೋರ್ಬ್ಸ್’ ಪ್ರಕಾರ, 77 ವರ್ಷದ ಉದ್ಯಮಿಯು 3.15 ಬಿಲಿಯ ಡಾಲರ್ (ಸುಮಾರು 24,000 ಕೋಟಿ ರೂಪಾಯಿ) ನಿವ್ವಳ ಸಂಪತ್ತು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News